Sunday, May 30, 2010

ಪರಶುರಾಮ ಸೃಷ್ಟಿ ಮಂಗಳೂರು...

'ಮಂಗಳೂರು' ಹೆಸರೇ ಸೂಚಿಸುವಂತೆ ಮಂಗಳಾ ದೇವಿಯಿಂದ ತನ್ನ ಹೆಸರನ್ನು ಪಡೆದುಕೊಂಡಿದೆ.ನೆರೆಯ ಕೇರಳಿಗರಿಗೆ ಇಂದಿಗೂ ಇದು ಮಂಗಳಾಪುರ.ಇದರ ಹಿನ್ನೆಲೆ ಗಮನಿಸಿದರೆ ಇದು ಹೌದು ಕೂಡ.ಸ್ಥಳೀಯ ದೇವತೆಯಾದ ಮಂಗಳಾ ದೇವಿಯಿಂದ ಮಂಗಳೂರು ತನ್ನ ಹೆಸರನ್ನು ಪಡೆದುಕೊಂಡಿದೆ.ಮತ್ಸ್ಯೇಂದ್ರ ನಾಥನೆಂಬ ನಾಥ್ ಪಂಥದ ಸಂತ, ಪೆರುಮಳಾದೇವಿ ಎಂಬ ಕೇರಳದ ರಾಜಕುಮಾರಿಯ ಜೊತೆ ಇಲ್ಲಿಗೆ ಬಂದಿದ್ದ. ಅವನು ರಾಜಕುಮಾರಿಯನ್ನು ತನ್ನ ಪಂಥಕ್ಕೆ ಪರಿವರ್ತಿಸಿಕೊಂಡು "ಮಂಗಳಾದೇವಿ" ಎಂದು ಮರುನಾಮಕರಣ ಮಾಡಿದನು. ಸ್ವಲ್ಪ ಸಮಯದ ಅನಾರೋಗ್ಯದಿಂದ ಮಂಗಳಾದೇವಿಯು ನಿಧನ ಹೊಂದಿದ್ದರಿಂದ ಅವರು ತಮ್ಮ ಪ್ರಯಾಣವನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಅವಳ ಹೆಸರಿನಲ್ಲಿ ಬೋಳಾರದಲ್ಲಿ ಒಂದು ದೇವಸ್ಥಾನವನ್ನು ನಿರ್ಮಿಸಲಾಯಿತು.ಇದುವೇ ಇತಿಹಾಸ ಪ್ರಸಿದ್ದ ಮಂಗಳಾ ದೇವಿ ದೇವಸ್ಥಾನ.

ಅದು ನಂತರ ಕ್ರಿ.ಶ.968 ರಲ್ಲಿ ಅಲೂಪ ದೊರೆ ಕುಂದ ವರ್ಮನಿಂದ ಜೀರ್ಣೋ ದ್ಧಾರಕ್ಕೆ ಒಳಪಟ್ಟಿತು.ಈ ನಗರದ ಹಲವು ಪುರಾತನ ಉಲ್ಲೇಖಗಳಲ್ಲಿ ಒಂದನ್ನು ಪಾಂಡ್ಯ ರಾಜ ಚೆಟ್ಟಿಯನ್ ನೀಡಿದ್ದಾನೆ. ಅವನು ಕ್ರಿ.ಶ.719 ರಲ್ಲಿ ಇದನ್ನು ಮಂಗಲಾಪುರಂ ಎಂದು ಕರೆದಿದ್ದ. 11 ನೇ ಶತಮಾನದ ಅರಬ್ಬಿ ಪ್ರಯಾಣಿಕ ಇಬ್ನ ಬತೂತ ಮಂಗಳೂರನ್ನು ಮಂಜರೂರ್ ಎಂದು ಉಲ್ಲೇಖಿಸಿದ್ದಾನೆ.ಅತೀ ಸಂಪತ್ಭರಿತ ಪ್ರದೇಶವಾದ ಇದು ಕದಂಬರು, ಆಳುಪರು,ವಿಜಯನಗರದ ಅರಸರು,ಹೈದರಾಲಿ-ಟಿಪ್ಪು ಸುಲ್ತಾನರು ಆಳ್ವಿಕೆಯಲ್ಲಿತ್ತು. ಕ್ರಿ.ಶ. 1526 ರಲ್ಲಿ ಪೋರ್ಚುಗೀಸರು ಮಂಗಳೂರನ್ನು ವಶಪಡಿಸಿಕೊಂಡರು. ಈ ಸಮಯದಲ್ಲಿ ಮ್ಯಾಂಗಲೋರ್ ಎಂಬ ಹೆಸರು ಅಧಿಕೃತವಾಯಿತು. ನಂತರ ಇದು ಬ್ರಿಟಿಷರ ಕೈವಶವಾದಾಗ ಈ ಪೋರ್ಚುಗೀಸ್ ಹೆಸರು ಆಂಗ್ಲ ಭಾಷೆಯಲ್ಲಿ ಮಿಳಿತಗೊಂಡಿತು.ಪರಶುರಾಮನ ಸೃಷ್ಟಿ ಎಂದೇ ಕರೆಯುವ ಈ ನಗರವು ಅರಬ್ಬೀ ಸಮುದ್ರ ಮತ್ತು ನದಿಗಳಿಂದ ಆವರಿಸಿಕೊಂಡಿದೆ.ಹಿಂದೂ ಪುರಾಣಗಳ ಅನುಸಾರ ಈಗಿನ ಮಂಗಳೂರು ಪ್ರದೇಶವು ಪರಶುರಾಮ ಸೃಷ್ಟಿಯ ಒಂದು ಭಾಗವಾಗಿತ್ತು. ಮಹರ್ಷಿ ಶ್ರೀ ಪರಶು ರಾಮನು ಸಮುದ್ರದಿಂದ ಹಿಂದಕ್ಕೆ ಪಡೆದುಕೊಂಡ ಕರಾವಳಿ ಪ್ರದೇಶವೇ ಈ ಪರಶುರಾಮ ಸೃಷ್ಟಿ. ನಂತರ ಪರಶುರಾಮನು ಭಾನು ವಿಕ್ರಮನೆಂಬ ರಾಜನನ್ನು ಇಲ್ಲಿಯ ಪಟ್ಟಕ್ಕೇರಿಸಿದನು. ಭಾನುವು ತನ್ನ ಸಹೋದರರಲ್ಲಿ ಒಬ್ಬನಾದ ಉದಯವರ್ಮನಿಗೆ, ದಕ್ಷಿಣದಲ್ಲಿ ಪಯಸ್ವಿನಿ ನದಿ ಹಾಗೂ ಉತ್ತರದಲ್ಲಿ ಗೋಕರ್ಣಗಳ ಮಧ್ಯದಲ್ಲಿರುವ ಈ ಪ್ರದೇಶದ ರಾಜ್ಯಭಾರವನ್ನು ಒಪ್ಪಿಸಿದನು. ಇತರ ಪುರಾಣಗಳ ಅನುಸಾರ, ರಾಮಾಯಣದ ಸಮಯದಲ್ಲಿ ಶ್ರೀ ರಾಮನು ತುಳುನಾಡಿನ ರಾಜನಾಗಿದ್ದನು. ಮಹಾಭಾರತದ ಕಾಲದಲ್ಲಿ ಪಾಂಡವರಲ್ಲಿ ಕಿರಿಯವನಾದ ಸಹದೇವನು ಇಲ್ಲಿಯ ರಾಜ್ಯಪಾಲನಾಗಿದ್ದನು. ಅಜ್ಞಾತ ವಾಸದ ಸಮಯದಲ್ಲಿ ಬನವಾಸಿಯಲ್ಲಿ ವಾಸವಾಗಿದ್ದ ಪಾಂಡವರು, ಮಂಗಳೂರಿನ ಸಮೀಪದ ಸರಪಾಡಿಗೆ ಭೇಟಿಕೊಟ್ಟಿದ್ದರು. ಪಾರ್ಥಸಾರಥಿ ಅರ್ಜುನನು ಗೋಕರ್ಣದಿಂದ ಕಾಸರಗೋಡು ಸಮೀಪದ ಅಡೂರಿಗೆ ಪ್ರಯಾಣಿಸಿದ್ದಾಗ ಈ ಸ್ಥಳವನ್ನು ಸಂದರ್ಶಿಸಿ ಹಾದುಹೋಗಿದ್ದ ಎಂಬುದು ನಂಬಿಕೆ. ಮಹರ್ಷಿಗಳಾದ ಕಣ್ವ, ವ್ಯಾಸ, ವಶಿಷ್ಠ, ವಿಶ್ವಾಮಿತ್ರರು ಇಲ್ಲಿ ಜಪದಲ್ಲಿ ತೊಡಗಿ ತಮ್ಮ ದಿನಗಳನ್ನು ಕಳೆದಿದ್ದರು.
ಈ ನಗರದ ಬಗ್ಗೆ ಹಲವು ಚಾರಿತ್ರಿಕ ಉಲ್ಲೇಖಗಳು ದೊರೆತಿವೆ. ಗ್ರೀಕ್ ಸಂತ ಕೋಸ್ಮಸ್ ಇಂಡಿಕೊಪ್ಲೆಸ್ಟಸ್ ಮಂಗಳೂರು ಬಂದರನ್ನು ಮ್ಯಾಂಗರೌತ್ ಬಂದರು ಎಂದು ಉಲ್ಲೇಖಿಸಿದ್ದಾನೆ. ಪ್ಲೈನಿ ಎಂಬ ರೋಮನ್ ಇತಿಹಾಸಜ್ಞ ನಿತ್ರಿಯಾಸ್ ಎಂಬ ಸ್ಥಳದ ಬಗ್ಗೆ ಉಲ್ಲೇಖಿಸಿದ್ದರೆ ಗ್ರೀಕ್ ಇತಿಹಾಸಕಾರ ಟಾಲೆಮಿಯು ನಿತ್ರೆ ಎಂಬ ಸ್ಥಳದ ಉಲ್ಲೇಖವನ್ನು ಮಾಡಿದ್ದಾನೆ. ಈ ಎರಡೂ ಉಲ್ಲೇಖಗಳು ಬಹುಶಃ ಮಂಗಳೂರಿನ ಮೂಲಕ ಹರಿಯುತ್ತಿರುವ ನೇತ್ರಾವತಿ ನದಿಯ ಬಗ್ಗೆ ಆಗಿರಬಹುದು. ಟಾಲೆಮಿಯು ತನ್ನ ರಚನೆಗಳಲ್ಲಿ ಮಂಗಳೂರನ್ನು ಮಗನೂರ್ ಎಂದೂ ಉಲ್ಲೇಖಿಸಿದ್ದಾನೆ.ರೋಮನ್ ಲೇಖಕ ಏರಿಯನ್ ಮಂಗಳೂರನ್ನು ಮ್ಯಾಂಡಗೊರಾ ಎಂದು ಕರೆದಿದ್ದಾನೆ. 7ನೇ ಶತಮಾನದ ಒಂದು ತಾಮ್ರ ಶಾಸನವು ಮಂಗಳೂರನ್ನು ಮಂಗಳಾಪುರ ಎಂದು ಉಲ್ಲೇಖಿಸಿದೆ.ಕ್ರಿ. ಶ. 200 ರಿಂದ 600 ರವರೆಗೆ ಕದಂಬರು ಈ ಪ್ರದೇಶವನ್ನು ಆಳಿದ್ದರು. 14ನೇ ಶತಮಾನದವರೆಗೆ ಮಂಗಳೂರು ಅಳುಪ ರಾಜವಂಶದ ರಾಜಧಾನಿಯಾಗಿತ್ತು. ಅಳುಪ ರಾಜ ಕವಿ ಅಲೂಪೇಂದ್ರನ ಸಮಯದಲ್ಲಿ ಆಡೆನ್ನ ವ್ಯಾಪಾರಿ ಬೆನಾಯಿಜು ಮಂಗಳೂರಿಗ ಬಂದಿದ್ದ. 14 ನೇ ಶತಮಾನದಲ್ಲಿ, ಈ ನಗರವು ಪರ್ಷಿಯಾ ಕೊಲ್ಲಿ ವ್ಯಾಪಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತ್ತು. ಮೊರಾಕ್ಕೊದ ಪ್ರಯಾಣಿಕ ಇಬ್ನ್ ಬತ್ತುತ, 1342ರಲ್ಲಿ ಮಂಗಳೂರಿಗೆ ಬಂದಿದ್ದಾಗ, ಒಂದು ವಿಶಾಲವಾದ ಅಳಿವೆಯ ಮೇಲಿರುವ ನಗರಕ್ಕೆ ತಲುಪಿರುದಾಗಿಯೂ, ಆ ನಗರದ ಹೆಸರು ಮಂಜುರನ್' ಅಥವಾ ಮಡ್ಜೌರ್ ಆಗಿರಬಹುದು ಎಂದು ವಿವರಿಸಿದ್ದಾನೆ. ಅವನು ಆ ನಗರವು ವ್ಯಾಪಾರ ಕೇಂದ್ರವಾಗಿತ್ತು ಮತ್ತು ಪರ್ಷಿಯಾ ಹಾಗೂ ಯೆಮೆನ್ನ ವ್ಯಾಪಾರಿಗಳು ಹಡಗಿನಲ್ಲಿ ಇಲ್ಲಿ ಬಂದು ವ್ಯಾಪಾರವನ್ನು ನಡೆಸುತಿದ್ದರು ಎಂದು ಪ್ರಸ್ತಾಪಿಸಿದ್ದಾನೆ. 1448ರಲ್ಲಿ ಅಬ್ದುಲ್ ರಝಾಕ್ ಎಂಬ ಪರ್ಷಿಯಾದ ರಾಯಭಾರಿ ವಿಜಯನಗರಕ್ಕೆ ಪ್ರಯಾಣಿಸುತ್ತಿದ್ದಾಗ ಇಲ್ಲಿಂದ ಹಾದುಹೋಗಿದ್ದ. ಅವನು ಇಲ್ಲಿ ಒಂದು ಅದ್ಭುತ ದೇವಾಲಯವನ್ನು ನೋಡಿರುವುದಾಗಿ ಹೇಳಿದ್ದಾನೆ. ಮೂಡಬಿದಿರೆಯಲ್ಲಿರುವ ಶಾಸನಗಳು , ವಿಜಯನಗರ ರಾಜವಂಶದ ಎರಡನೆಯ ವೀರ ಹರಿಹರರಾಯನ ಕಾಲದಲ್ಲಿ, ರಾಜ ಮಂಗರಸ ಒಡೆಯ ಮಂಗಳೂರು ರಾಜ್ಯದ ರಾಜ್ಯಪಾಲನಾಗಿದ್ದ ಎಂದು ವಿವರಿಸುತ್ತವೆ. ಇನ್ನೊಂದು ಶಾಸನವು ವಿಜಯನಗರದ ರಾಜ ಎರಡನೆಯ ವೀರ ದೇವರಾಯನ ಸಮಯದಲ್ಲಿ, 1429 ರಲ್ಲಿ ದೇವರಾಜ ಒಡೆಯ ಮಂಗಳೂರು ರಾಜ್ಯವನ್ನು ಆಳಿದ್ದನು ಎಂದು ಉಲ್ಲೇಖಿಸುತ್ತದೆ. ಹಲವು ಬಲಶಾಲಿ ಸಾಮ್ರಾಜ್ಯಗಳು ಮಂಗಳೂರಿನ ಸ್ವಾಧೀನಕ್ಕಾಗಿ ಹೋರಾಟವನ್ನು ನಡೆಸಿವೆ. ಪೋರ್ಚುಗೀಸರ ಆಗಮನಕ್ಕಿಂತ ಮೊದಲು ಮಂಗಳೂರನ್ನು ಆಳಿದ ರಾಜವಂಶಗಳಲ್ಲಿ ಪಶ್ಚಿಮ ಚಾಲುಕ್ಯರು, ರಾಷ್ಟ್ರಕೂಟರು ಮತ್ತು ಹೊಯ್ಸಳರು ಪ್ರಮುಖರು. ಮಂಗಳೂರಿನ ಮೇಲೆ ಯುರೋಪಿಯನ್ ಪ್ರಭಾವವನ್ನು 1498 ರಿಂದ ಗುರುತಿಸಬಹುದು. ಆ ಸಮಯದಲ್ಲೇ ಪೋರ್ಚಿಗೀಸ್ ನಾವಿಕ ವಾಸ್ಕೋ ಡ ಗಾಮನು ಮಂಗಳೂರಿನ ಸಮೀಪದ ಉಡುಪಿ ಸೈಂಟ್ ಮೇರಿಸ್ ದ್ವೀಪಗಳಲ್ಲಿ ಬಂದಿಳಿದ್ದಿದ್ದ.1590 ರಲ್ಲಿ ಪೋರ್ಚುಗೀಸರು ಇದನ್ನು ವಿಜಯನಗರದ ಅರಸರಿಂದ ವಶಪಡಿಸಿಕೊಂಡರು. 1526 ರಲ್ಲಿ ಪೋರ್ಚುಗೀಸ್ ವೈಸರಾಯ್ ಲೋಪೊ ಡೆ ಸಾಂಪಯೋ ಬಂಗಾರ ರಾಜ ಮತ್ತು ಅವನ ಮೈತ್ರಿ ಪಡೆಯನ್ನು ಸೋಲಿಸುವಲ್ಲಿ ಸಫಲನಾದನು. ಇದರಿಂದಾಗಿ ಇಲ್ಲಿನ ವ್ಯಾಪರ ವಹಿವಾಟು ಮುಸ್ಲಿಮರ ಕೈ ತಪ್ಪಿ ಪೋರ್ಚುಗೀಸರ ಕೈವಶವಾಯಿತು. 16 ಮತ್ತು 17ನೇ ಶತಮಾನಗಳಲ್ಲಿ ಪೋರ್ಚುಗೀಸರು ಮಂಗಳೂರು ಬಂದರಿನ ಮೂಲಕ ಅರಬ್ಬೀ ಸಮುದ್ರದ ಅಧಿಪತ್ಯವನ್ನು ಮುಂದುವರೆಸಿದರು. 16ನೇ ಶತಮಾನದಲ್ಲಿ ಮಂಗಳೂರು ಗೋವಾದಿಂದ ಗೌಡ ಸಾರಸ್ವತ ಬ್ರಾಹ್ಮಣರು ಮತ್ತು ರೋಮನ್ ಕಾಥೊಲಿಕರ ಅಗಾಧವಾದ ಜನಪ್ರವಾಹವನ್ನು ಕಂಡಿತು. 1695ರಲ್ಲಿ ಅರಬ್ ವ್ಯಾಪಾರದ ಮೇಲೆ ಪೋರ್ಚುಗೀಸರ ನಿರ್ಬಂಧದಿಂದಾಗಿ, ಇದು ಅರಬರಿಂದ ದಹಿಸಲ್ಪಟ್ಟಿತು. 17ನೇ ಶತಮಾನದ ಮಧ್ಯದಲ್ಲಿ ಇಕ್ಕೇರಿ ಮನೆತನದ ವೆಂಕಟಪ್ಪ ನಾಯಕನು ಪೋರ್ಚುಗೀಸರನ್ನು ಸೋಲಿಸಿದನು. ಇವರ ಆಳ್ವಿಕೆಯು 1762ರವರೆಗೆ ಮುಂದುವರೆಯಿತು.1763ರಲ್ಲಿ ಹೈದರಾಲಿಯು ಮಂಗಳೂರನ್ನು ಜಯಿಸಿದನು. 1768 ಮತ್ತು 1794 ರ ಮಧ್ಯ ಬ್ರಿಟಿಷರು ಇದನ್ನು ಕೈವಶ ಪಡಿಸಿಕೊಳ್ಳುವವರೆಗೆ ನಗರವು ಅವನ ಅಧೀನದಲ್ಲಿತ್ತು. ನಂತರ 1794ರಲ್ಲಿ ಹೈದರಾಲಿಯ ಮಗ ಟಿಪ್ಪು ಸುಲ್ತಾನನು ಇನ್ನೊಮ್ಮೆ ಇದನ್ನು ತನ್ನ ಹತೋಟಿಗೆ ತೆಗೆದುಕೊಂಡನು. ಇವನ ಆಳ್ವಿಕೆಯ ಸಮಯದಲ್ಲಿ ನಗರವು ನಿರಂತರವಾಗಿ ಹಲವು ಆಂಗ್ಲೊ-ಮೈಸೂರು ಯುದ್ಧಗಳಿಗೆ ಸಾಕ್ಷಿಯಾಗಿ ನಿಂತಿತು. ಎರಡನೇ ಆಂಗ್ಲೊ-ಮೈಸೂರು ಯುದ್ಧವು 11 ಮಾರ್ಚ್ 1784ರಲ್ಲಿ ಟಿಪ್ಪು ಸುಲ್ತಾನ ಮತ್ತು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಮಧ್ಯದ ಮಂಗಳೂರು ಒಪ್ಪಂದದೊಂದಿಗೆ ಕೊನೆಗೊಂಡಿತು.1791ರಲ್ಲಿ ಬ್ರಿಟಿಷರು ಇದನ್ನು ಮತ್ತೊಮ್ಮೆ ವಶಪಡಿಸಿಕೊಂಡರು. ಆದರೆ 1793ರಲ್ಲಿ ಟಿಪ್ಪು ಇದರ ಮೇಲೆ ಯುದ್ದ ಹೂಡಿದ ಪರಿಣಾಮ 1794ರಲ್ಲಿ ಬ್ರಿಟಿಷರು ನಗರವನ್ನು ಟಿಪ್ಪುವಿಗೆ ಬಿಟ್ಟು ಕೊಟ್ಟರು. 1799ರಲ್ಲಿ 4ನೇ ಆಂಗ್ಲೊ-ಮೈಸೂರು ಯುದ್ಧದ ಸಮಯದಲ್ಲಿ ಟಿಪ್ಪು ಸುಲ್ತಾನ ಯುದ್ದದಲ್ಲಿ ಮಡಿದ ನಂತರ,ಮಂಗಳೂರು ನಗರವು ಶಾಶ್ವತವಾಗಿ ಬ್ರಿಟಿಷರ ಕೈವಶವಾಯಿತು. ನಂತರ 1947 ರಲ್ಲಿ ಭಾರತದ ಸ್ವಾತಂತ್ರ್ಯದ ತನಕ ಇದು ಬ್ರಿಟಿಷರ ಅಧೀನದಲ್ಲಿಯೇ ಇದ್ದಿತು.
ಹಲವು ಭಾಷೆಗಳು ಸಮ್ಮಿಲಿತ ವಾದ ಮಂಗಳೂರು ನಗರವನ್ನು ವಿಶ್ವದ ಯಾವುದೇ ಭಾಗದಲ್ಲಿ ಕಾಣಲು ಸಾಧ್ಯವಿಲ್ಲ.ಇಲ್ಲಿ ಹಲವು ಭಾಷೆಗಳು ಆಡಲ್ಪಡುತ್ತಿದ್ದು ಈ ನಗರವು ಹಲವು ಹೆಸರುಗಳನ್ನೂ ಹೊಂದಿದೆ. ಇಲ್ಲಿಯ ಮೂಲ ನಿವಾಸಿಗಳಾದ ತುಳುವರು ಮಾತನಾಡುವ ತುಳು ಭಾಷೆಯಲ್ಲಿ ಮಂಗಳೂರಿಗೆ ಕುಡ್ಲ ಎಂಬ ಹೆಸರಿದೆ.ಸಂಗಮ ಎಂದರ್ಥದ ಈ ಪದ ಬಹುಷ ನೇತ್ರಾವತಿ ಮತ್ತು ಫಾಲ್ಗುಣಿ ನದಿಗಳು ಇಲ್ಲಿ ಸಂಗಮಿ ಸುವುದರಿಂದ ಸ್ಥಳೀಯ ತುಳುವರು ಇದನ್ನು ಕುಡ್ಲ ಎಂದು ಕರೆಯುತ್ತಿರಲೂ ಬಹುದು. ಕೊಂಕಣಿಯನ್ನಾಡುವ ಜನರು ಇದನ್ನು ಕೊಡಿಯಾಲ್ ಎನ್ನುತ್ತಾರೆ. ಸ್ಥಳೀಯ ಬ್ಯಾರಿ ಸಮುದಾಯದವರು ಬ್ಯಾರಿ ಭಾಷೆಯಲ್ಲಿ ಮಂಗಳೂರನ್ನು ಮೈಕಾಲ ಎಂದು ಕರೆಯುತ್ತಾರೆ. ಮೈಕಾಲ ಎಂದರೆ ಇದ್ದಿಲು ಎಂದರ್ಥ. ಹಿಂದಿನ ಕಾಲದಲ್ಲಿ ನೇತ್ರಾವತಿ ನದಿಯ ಪರಿಸರಗಳಲ್ಲಿ ಮರದಿಂದ ಇದ್ದಿಲು ತಯಾರಿಸುವ ವೃತ್ತಿಯಿತ್ತು ಎಂಬ ಹಿನ್ನೆಲೆಯಲ್ಲಿ ನಗರಕ್ಕೆ ಈ ಹೆಸರು ಬಂದಿದೆ ಎಂದೂ ಹೇಳುತ್ತಾರೆ. ಪಕ್ಕದ ಕೇರಳೀಯರು ಮಂಗಳೂರನ್ನು ಮಂಗಳಾಪುರಂ ಎನ್ನುತ್ತಾರೆ. ಆಂಗ್ಲ ಭಾಷೆಯಲ್ಲಿ ಮಂಗಳೂರನ್ನು ಮ್ಯಾಂಗಲೋರ್ ಎಂದು ಉಚ್ಚರಿಸುತ್ತಾರೆ.ಹವ್ಯಕ ಭಾಷೆಯಲ್ಲಿ ಮಂಗಳೂರನ್ನು ಕೊಡೆಗಾಲ ಎಂದು ಕರೆಯುವುದು ರೂಡಿಯಲ್ಲಿದೆ.
ಬ್ರಿಟಿಷ್ ಅಧಿಪತ್ಯದ ಸಮಯದಲ್ಲಿ ನಗರವು ಶಾಂತಿಯುತವಾದ ಆಡಳಿತವನ್ನು ಕಂಡಿತು. ಈ ಸಮಯದಲ್ಲೇ ಶಾಶ್ವತವಾದ ದೃಶ್ಯಮಾನ ಅಭಿವೃದ್ಧಿಗೆ ಮಂಗಳೂರು ಸಾಕ್ಷಿಯಾಯಿತು. ಕ್ರಮೇಣ ಇದು ಶಿಕ್ಷಣ ಮತ್ತು ಉದ್ಯಮದಲ್ಲಿ ಪ್ರವರ್ಧಮಾನವಾಗಿ ಬೆಳೆದು, ಆಮದು ಮತ್ತು ರಫ್ತಿನ ವಾಣಿಜ್ಯ ಕೇಂದ್ರವಾಗಿ ರೂಪುಗೊಂಡಿತು. 1834 ರಲ್ಲಿ ಜರ್ಮನ್ ಬಾಸೆಲ್ ಮಿಶನ್ ನ ಆರಂಭವು ಹತ್ತಿ ನೇಯ್ಗೆ ಮತ್ತು ಹಂಚು ತಯಾರಿಕಾ ಉದ್ಯಮಗಳನ್ನು ನಗರಕ್ಕೆ ತಂದುಕೊಟ್ಟಿತು.
1907 ರಲ್ಲಿ ಮಂಗಳೂರನ್ನು ದಕ್ಷಿಣ ರೈಲ್ವೆಯ ಜೊತೆ ಜೋಡಿಸಿದುದು ಮತ್ತು ನಂತರ ಮೋಟಾರ್ ವಾಹನಗಳ ಆಗಮನವು ನಗರದೊಂದಿಗೆ ವ್ಯಾಪಾರ ಮತ್ತು ಸಂಪರ್ಕವನ್ನು ಇನ್ನೂ ಹೆಚ್ಚಿಸಿತು.ರೋಮನ್ ಕಥೊಲಿಕ್ ಮಿಶನರಿಗಳು ಶಿಕ್ಷಣ, ಆರೋಗ್ಯ ಮತ್ತು ಸಮಾಜ ಸೇವೆಯಲ್ಲಿ ತುಂಬಾ ಪ್ರಮುಖವಾದ ಕೆಲಸಗಳನ್ನು ಮಾಡಿದ್ದರು ಎಮಬುದು ಗಮನಾರ್ಹ ಸಂಗತಿ. 1865ರ ಮದ್ರಾಸ್ ನಗರ ಅಭಿವೃದ್ಧಿ ನಿಯಮದ ಅನುಸಾರ ಮಂಗಳೂರು ನಗರಸಭೆ ಆಡಳಿತದ ಅಧೀನದಲ್ಲಿ ಬರುತ್ತದೆ. ಇದರಿಂದಾಗಿ 22 ಮೇ, 1866ರಲ್ಲಿ ನಗರವು ನಗರಸಭೆಯಾಗಿ ಪ್ರತಿಷ್ಟಾಪನೆಗೊಂಡಿತು.1947 ರಲ್ಲಿ ಭಾರತದ ಸ್ವಾತಂತ್ರ್ಯದ ನಂತರ, ಮದ್ರಾಸ್ ಪ್ರೆಸಿಡೆನ್ಸಿಯ ಭಾಗವಾಗಿದ್ದ ಮಂಗಳೂರನ್ನು ೧೯೫೬ದಲ್ಲಿ ಮೈಸೂರು ರಾಜ್ಯದೊಳಗೆ ವಿಲೀನಗೊಳಿಸಲಾಯಿತು. ಮೈಸೂರು ರಾಜ್ಯಕ್ಕೆ ಬಂದರಿನ ಸೌಲಭ್ಯವನ್ನು ಒದಗಿಸುತ್ತಿದ್ದ ಮಂಗಳೂರು, ರಾಜ್ಯದಲ್ಲಿ ಪ್ರಮುಖ ಸ್ಥಾನವನ್ನು ಪಡೆಯಿತು.90ನೇ ಶತಮಾನದ ಅಂತ್ಯವು ಮಂಗಳೂರು ಉದ್ಯಮ ಮತ್ತು ವಾಣಿಜ್ಯ ಕೇಂದ್ರವಾಗಿ ಅಭಿವೃದ್ಧಿ ಹೊಂದುವುದಕ್ಕೆ ಸಾಕ್ಷಿಯಾಯಿತು.ಬಿರುಸಿನ ಔದ್ಯೋಗಿಕರಣವು ನಗರವನ್ನು ವ್ಯಾಪಿಸುತ್ತಿದ್ದರೂ ಮಂಗಳೂರು ತನ್ನ ಹಳೆಯ ಸೊಬಗನ್ನು ಉಳಿಸಿಕೊಂಡು ಬಂದಿದೆ.

1 comment:

  1. Tulunadu parashu rama na shrishti yennuvudu shudda sullu, edu kalave vaidika shahigala kuthanthra......

    ReplyDelete