ಗಾಂಧಿ ಟೋಪಿ,ಶುಭ್ರ ಖಾದಿ ಬಟ್ಟೆ,ಬಿಳಿ ಗಡ್ಡ, ಕನ್ನಡಕ, ಕಂಚಿನ ಕಂಠ. ಅದರಲ್ಲಿ ಹೊರಹೊಮ್ಮಿದ ಕಯ್ಯರ ಕಿಂಞಣ್ಣ ರೈ ಅವರ ‘‘ಐಕ್ಯವೊಂದೇ ಮಂತ್ರ...’’ ಹಾಡು. ಇಷ್ಟು ವಿವರಿಸಿದರೆ ಸಾಕು, ಅವಿಭಾಜಿತ ದಕ್ಷಿಣ ಕನ್ನಡ ಕರಾವಳಿಯಲ್ಲಿ ಯಾರನ್ನೂ ಕೇಳಿದರು ಹೇಳುತ್ತಾರೆ ‘‘ಅವರು ಇದಿನಬ್ಬ’’. ಬಿ. ಎಂ.ಇದಿನಬ್ಬ ಕನ್ನಡ ನಾಡನ್ನು ಅಗಲಿ ವರ್ಷಗಳೇ ಸಂದಿವೆ. ಅವರ ಕಂಚಿನ ಕಂಠದ ಗಮಕ ಹಾಡುಗಳಿಲ್ಲದೆ ಕರಾವಳಿಯ ವೇದಿಕೆಗಳು ಬಣಗುಟ್ಟುತ್ತಿವೆ.ಇದಿನಬ್ಬರ ಹೆಸರೇ ಸದಾ ಕೋಮು ದಳ್ಳುರಿಯಲ್ಲಿ ಬೆಂದ ಕರಾವಳಿಯ ಕೋಮುಸೌಹಾರ್ದಕ್ಕೆ ಪರ್ಯಾಯ ಪದ. ಬಹುಷ ಸೌಹಾರ್ದದ ಕುರಿತಂತೆ ಮಾತನಾಡಿದ್ದು ಬಹಳಷ್ಟು ಕಡಿಮೆ.ಬದಲಿಗೆ ಅದನ್ನು ಬದುಕಿನಲ್ಲಿ ತೋರಿಸಿಕೊಟ್ಟವರು. ಒಬ್ಬ ಮುಸ್ಲಿಮನಾಗಿದ್ದರೂ ಇದಿನಬ್ಬ ಎಂದಿಗೂ ಕೇವಲ ಮುಸ್ಲಿಮರ ನಾಯಕರಾಗಿರಲಿಲ್ಲ.ಅವರು ಎಂದೆಂದಿಗೂ ಕನ್ನಡದ ಕಟ್ಟಾಳು. ಕನ್ನಡತನ, ಸೌಹಾರ್ದ, ಸಹಕಾರ, ಸರಳತೆ, ನೇರನುಡಿ, ಪ್ರಾಮಾಣಿಕ ಬದುಕು...ಇವು ಇದಿನಬ್ಬ ನಮ್ಮ ನಡುವೆ ಊರಿ ಹೋದ ಹೆಜ್ಜೆಗಳು....ಆ ಹೆಜ್ಜೆಗಳ ಹಿಂದೆ ಹೆಜ್ಜೆಗಳನ್ನಿಟ್ಟು ಸಾಗಿದರೂ ಸಾಕು...ಕರಾವಳಿ ಮಾತ್ರವಲ್ಲ, ಇಡೀ ಕರ್ನಾಟಕವೇ ಸೌಹಾರ್ದದ ಬೀಡಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
ಇದಿನಬ್ಬರವರ ಕುಟುಂಬದ ಬಗ್ಗೆ ಮಾಹಿತಿ ಕಲೆ ಹಾಕಿದರೆ, ಇದಿನಬ್ಬರ ತಂದೆ ತೀರಿದಾಗ ಅವರು ಹತ್ತು ವರ್ಷದ ಕೂಸು. ತಾಯಿ ಗರ್ಭವತಿ. ಇದ್ದುದರಲ್ಲಿ ಇದಿನಬ್ಬರೇ ದೊಡ್ಡ ಮಗ.ತಂದೆ ನಿಧನರಾಗುವ ಮೊದಲು ತನ್ನ ಮಕ್ಕಳನ್ನೆಲ್ಲ ಜೊತೆಗೂಡಿಸಿ ಹೇಳಿದ್ದರಂತೆ ‘‘ಮಕ್ಕಳೇ... ನಿಮಗೆ ವಂಚನೆಯಾದರೆ ಉಪ್ಪಿನಂಗಡಿಗೆ ತೆರಳಿ... ಅಲ್ಲಿ ಕೊಂಕಣಿಗಳಿದ್ದಾರೆ... ಅವರು ನ್ಯಾಯ ಪರರು... ನಿಮಗೆ ನ್ಯಾಯ ನೀಡಬಹುದು...’’ ತನ್ನ ತಾಯಿಯ ಬೆರಳಿಡಿದು ಇದಿನಬ್ಬರು ದೂರದ ಆತೂರಿನಿಂದ ಬೊಳುಂಬುಡಕ್ಕೆ ಬಳಿಕ ಸಮೀಪದ ಮಠಕ್ಕೆ ಬಂದರು. ಬಿ ಎಂದರೆ ಬೊಳುಂಬುಡ. ಎಂ ಎಂದರೆ ಮಠ. ಇದೇ ಬಿ. ಎಂ. ಪದಗಳು ಮುಂದೆ ಅವರ ಜೀವನುದ್ದಕ್ಕೂ ಅಂಟಿಕೊಂಡಿದ್ದುವು. ಒಂದೆಡೆ ಕಡು ಬಡತನ, ಇನ್ನೊಂದೆಡೆ ಗರ್ಭಿಣಿ ತಾಯಿ. ಹಗಲಿರುಳು ತಾಯಿಯ ಸೇವೆಯನ್ನು ಮಾಡಿರುವುದು ಮಾತ್ರವಲ್ಲ, ಮುಂದೆ ತನಗೆ ಸಿಕ್ಕಿದ ಅಧಿಕಾರ, ವಿದ್ಯೆ, ಗೌರವ ಎಲ್ಲವೂ ಆ ತಾಯಿಯ ಸೇವೆಯ ಪ್ರತಿಫಲ ಎಂದು ತನ್ನ ಮೊಮ್ಮಕ್ಕಳನ್ನು ಕೂರಿಸಿ ಪದೇ ಪದೇ ಹೇಳುತ್ತಿದ್ದರು.ತನ್ನ ತಾಯಿಯ ಸೇವೆಯನ್ನು ಮಾಡಿದ ಕತೆಯನ್ನು ಹೇಳುವುದೆಂದರೆ ಇದಿನಬ್ಬರಿಗೆ ಅತ್ಯುತ್ಸಾಹ. ಬಾಣಂತಿ ತಾಯಿಯ ಮಲವನ್ನು ಕೈಯಲ್ಲಿ ಬಾಚಿ ಎತ್ತಿ ಒಗೆದಿದ್ದೇನೆ ಎನ್ನುವುದು ಅವರ ಜೀವನದ ಅತಿ ದೊಡ್ಡ ಹೆಮ್ಮೆ.ಇದಿನಬ್ಬರಿಗೆ ಯಾವಾಗ ಮೊಳಹಳ್ಳಿ ಶಿವರಾಯರ ಸಂಪರ್ಕವಾಯಿತೋ ಅವರ ಬದುಕಿನ ದಿಕ್ಕನ್ನೇ ಬದಲಿಸಿತು.ಅಷ್ಟಕ್ಕೂ ಮೊಳಹಳ್ಳಿ ಇದಿನಬ್ಬರನ್ನು ಮೊತ್ತ ಮೊದಲು ಕಂಡದ್ದು ಉಪ್ಪಿನಂಗಡಿಯ ಪ್ರಾಥಮಿಕ ಶಾಲೆಯಲ್ಲಿ. ಅಲ್ಲಿನ ‘ವಿದ್ಯಾರ್ಥಿ ಮಿತ್ರ’ ಎನ್ನುವ ಗೋಡೆ ಪತ್ರಿಕೆಯಲ್ಲಿ ಒಂದು ಪುಟ್ಟ ಅಜ್ಜಿ ಕತೆಯನ್ನು ಮೊಳ ಹಳ್ಳಿ ಓದಿದರಂತೆ. ಅವರು ರೋಮಾಂಚಿತರಾದುದು ಆ ಕತೆಯ ಕೆಳಗಡೆ ಬರೆದ ‘ಇದಿನಬ್ಬ’ ಎನ್ನುವ ಹೆಸರನ್ನು ಕಂಡು.ಮುಸ್ಲಿ ಮರು ಶಾಲೆಗೆ ಕಾಲಿ ಡುವು ದನ್ನು ಊಹಿ ಸುವು ದಕ್ಕೂ ಸಾಧ್ಯ ವಾಗ ದ ಆ ಕಾಲ ದಲ್ಲಿ ಹುಡು ಗನೊಬ್ಬ ‘ಗೋಡೆ ಪತ್ರಿಕೆ’ಯಲ್ಲಿ ಕತೆ ಬರೆ ದಿದ್ದಾನೆ ‘‘ಎಲ್ಲಿ ದ್ದಾನೆ ಈ ಇದಿ ನಬ್ಬ?’’ ಕೇಳಿ ದರಂತೆ ಮೊಳ ಹಳ್ಳಿ. ಹುಡುಗ ನನ್ನು ಕಂಡದ್ದೇ ತಲೆ ಸವರಿ, ಎದೆಗೊತ್ತಿ ‘‘ಚೆನ್ನಾಗಿ ಬರೆದಿದ್ದೀಯ ಮಗು... ಮುಂದುವರಿಸು’’ ಎಂದರಂತೆ. ಬಹುಶಃ ನಿಜವಾದ ಕವಿ, ಸಹಕಾರಿ, ರಾಜಕಾರಣಿ ಇದಿ ನಬ್ಬ ಹುಟ್ಟಿದ ಘಳಿಗೆ ಅದು. ಮುಂದೆ ಮೊಳ ಹಳ್ಳಿಯೇ ಇದಿನಬ್ಬ ಬದುಕಿನ ಕೈಮರವಾದರು. ಇದಿನಬ್ಬರ ಬದುಕನ್ನು ಮೊಳಹಳ್ಳಿಯೇ ರೂಪಿಸಿದರು. ಅದನ್ನು ತನ್ನ ಸಾವಿನ ಕೊನೆಯ ಘಳಿಗೆಯವರೆಗೂ ಅವರು ಸ್ಮರಿಸುತ್ತಿದ್ದರು. ಮುಂದೆ ಅವರಿಗೆ ಸಿಕ್ಕಿದ್ದು ಶಿವರಾಮ ಕಾರಂತ ಎಂಬ ಕಿಂದರಿ ಜೋಗಿ. ಅವರ ಬಾಲ ಹಿಡಿದು ಪುತ್ತೂರಿನಾದ್ಯಂತ ಸುತ್ತಿದವರು ಇದಿನಬ್ಬ.ಹೀಗೆ ಅವರ ಬಾಲ್ಯದಲ್ಲಿ ಮೊಳಹಳ್ಳಿ, ಕಾರಂತ, ಉಗ್ರಾಣ ಮಂಗೇಶರಾಯ, ಕಡವೆ ಶಂಭುಶರ್ಮ ತನ್ನ ಇಳಿವಯಸ್ಸಿನಲ್ಲೂ ತನ್ನ ಬದುಕನ್ನು ರೂಪಿಸಿದ ನೂರಾರು ಹೆಸರುಗಳನ್ನು ಅವರು ಮಂತ್ರದಂತೆ ಪಟಪಟನೆ ಉಸುರುತ್ತಿದ್ದರು.ಹೈಸ್ಕೂಲ್ ಮುಗಿಸಿದಾಗ ಅವರ ಮುಂದಿದ್ದದ್ದು ಎರಡು ದಾರಿ. ಒಂದು ಅವರ ಮೇಲೆ ದಟ್ಟ ಪ್ರಭಾವ ಬೀರಿದ ಸೀದಿ ಕುಂಞ ಮುಸ್ಲಿಯಾರ್. ಇನ್ನೊಂದು ಮೊಳಹಳ್ಳಿ ಶಿವರಾಯರು. ಇನ್ನು ಮುಸ್ಲಿಯಾರ್ ಆದರೆ ಹೇಗೆ ಎನ್ನುವುದು ಇದಿನಬ್ಬರ ತಲೆಯಲ್ಲಿ ಸುಳಿದಿತ್ತಂತೆ ಮತ್ತು ಒಂದು ನಿರ್ಧಾರಕ್ಕೂ ಬಂದಿದ್ದರಂತೆ. ಅದಾವ ಮಾಯೆಯೋ... ಹಾಗೆ ನಿರ್ಧಾರ ಮಾಡಿದ ಮರುದಿನವೇ ಅವರ ಅಜ್ಜನಿಗೆ ಮೊಳಹಳ್ಳಿ ಶಿವರಾಯರ ಪತ್ರ ಬಂದಿತ್ತು ‘‘ಇದಿನಬ್ಬ ತಕ್ಷಣ ಮಂಗಳೂರಿಗೆ ಬರಲಿ... ಸಹಕಾರವನ್ನು ಸೇರಿಕೊಳ್ಳಲಿ...’’ ಆ ಪತ್ರ ಮುಂದೆ ಇದಿನಬ್ಬರನ್ನು ಈ ನಾಡಿನ ವಿಧಾನಸೌಧದ ಬಳಿಗೆ ಒಯ್ಯಿತು.ಇದಿನಬ್ಬರು ಕವಿತೆಗಳು ಬರೆದದ್ದು ಮಾತ್ರವಲ್ಲ, ಅದನ್ನು ಶಾಲೆಶಾಲೆಗಳಿಗೆ ಒಯ್ದು ಅಲ್ಲಿ ಹಾಡುತ್ತಿದ್ದರು..! ಕಂಚಿನ ಕಂಠ, ಸ್ಪಷ್ಟ ಭಾಷೆ... ಗಾಂಧೀವಾದದ ಹಿನ್ನೆಲೆಯು ಅವರನ್ನು ರಾಜಕೀಯಕ್ಕೆ ಒಯ್ಯಿತು. ಕಡಲ ತಡಿಯ ಉಳ್ಳಾಲದಂತಹ ಪರಿಸರದಲ್ಲಿ ಕನ್ನಡ ಎಂದರೆ ‘ಕಾಫಿರ್‌ಗಳ ಭಾಷೆ’ ಎನ್ನುವಂತಹ ಸನ್ನಿವೇಶವಿತ್ತು. ಅಂತಹ ಹೊತ್ತಿನಲ್ಲಿ ಉಳ್ಳಾಲದ ಮುಸ್ಲಿಮರೇ ದಿಗ್ಭ್ರಮೆ ಪಡುವಂತೆ ಕನ್ನಡದಲ್ಲಿ ಮಾತನಾಡಿದರು.
ಸುಮಾರು 60 ದ ದಶಕದಲ್ಲಿ ಸಕ್ರೀಯ ರಾಜಕರಣಕ್ಕೆ ಬಂದ ಇವರಿಗೆ ಅವರಿಗೆ ಕಾಂಗ್ರೆಸ್‌ನಿಂದ ಟಿಕೆಟ್ ನೀಡಿದವರು ನಿಜಲಿಂಗಪ್ಪ.ಅಂದು ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ರಾಗಿದ್ದವರು ಕೆ.ಕೆ. ಶೆಟ್ಟಿ. ಅಪ್ಪಟ ಜಾತ್ಯತೀತರಾಗಿದ್ದ ಇವರನ್ನು ‘ಕಾಕ ಶೆಟ್ಟಿ’ ಎಂದೂ ಹಿಂದಿನಿಂದ ತಮಾಷೆ ಮಾಡುತ್ತಿದ್ದರಂತೆ. ಶೆಟ್ಟಿಯವರೊಂದಿಗೆ ‘‘ಈ ಬಾರಿ ಯಾರಾದರೂ ಮುಸ್ಲಿಮರಿಗೆ ಉಳ್ಳಾಲದಿಂದ ಟಿಕೆಟ್ ಕೊಡಬೇಕು’’ ಎಂದು ನಿಜಲಿಂಗಪ್ಪ ಹೇಳಿದರಂತೆ. ತಮಾಷೆಯೆಂದರೆ ಒಬ್ಬನೇ ಒಬ್ಬ ಮುಸ್ಲಿಮರೂ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಮುಂದೆ ಬರಲಿಲ್ಲವಂತೆ. ಆಗ ನಿಜಲಿಂಗಪ್ಪ ‘‘ಇದಿನಬ್ಬ ಎಂಬ ಹುಡುಗನಿದ್ದಾನಲ್ಲ... ಅವನನ್ನು ನಿಲ್ಲಿಸಿದರೆ ಹೇಗೆ?’’ ಎಂದು ಕೇಳಿದರಂತೆ. ಕೆ.ಕೆ. ಶೆಟ್ಟಿ ಇದಿನಬ್ಬರ ಹಿಂದೆ ಬಿದ್ದರು. ಇದಿನಬ್ಬರು ಸ್ಪಷ್ಟವಾಗಿ ನಿರಾಕರಿಸಿದರು. ಆದರೆ ಶೆಟ್ಟಿಯವರು ಬಿಡಬೇಕಲ್ಲ. ಅವರು ಪತ್ರಿಕೆಗೆ ಘೋಷಿಸಿಯೇ ಬಿಟ್ಟರು. ಮರುದಿನ ಇದಿನಬ್ಬ ಅಭ್ಯರ್ಥಿ ಎಂದು ಪತ್ರಿಕೆಯಲ್ಲಿ ಪ್ರಕಟವಾಯಿತು. ಇದಿನಬ್ಬರು ಕಂಗಾಲಾಗಿದ್ದರು. ಅವರ ದೊಡ್ಡ ಸಮಸ್ಯೆ ‘ಠೇವಣಿ ಕಟ್ಟುವುದಕ್ಕೂ ಅವರಲ್ಲಿ ದುಡ್ಡಿರಲಿಲ್ಲ’’ಇದಿ ನಬ್ಬರು ತನ್ನ ಬದುಕಿ ನಲ್ಲಿ ಪದೇ ಪದೇ ಸ್ಮರಿ ಸುವ ಇನ್ನೊಂ ದು ಹೆಸರು ಪೈ ಲೂರು ಲಕ್ಷ್ಮೀ ನಾರಾ ಯಣ ರಾಯರು. ಪ್ರಥಮ ಬಾರಿ ಚುನಾವಣೆಗೆ ನಿಂತಾಗ ಅವರಿಗೆ ಠೇವಣಿ ಕಟ್ಟಲು ದುಡ್ಡು ಕೊಟ್ಟಿರುವುದೇ ಪೈಲೂರು. ತನ್ನ ಸಂಬಂಧಿ ಕರೊಬ್ಬರೊಂದಿಗೆ ಸಾಲ ಕೇಳಿದ ಇದಿನಬ್ಬರು ಇಲ್ಲ ಅನ್ನಿಸಿಕೊಂಡರಂತೆ. ಇಂತಹ ಹೊತ್ತಿನಲ್ಲಿ ಪೈಲೂರು ಸಾಲಕೊಟ್ಟು, ಆತ್ಮವಿಶ್ವಾಸ ತುಂಬಿದರಂತೆ. ಆದರೆ ಮೊದಲ ಚುನಾವಣೆಯಲ್ಲಿ ಕೇವಲ 800 ಓಟಿಗೆ ಸೋತರು. 1967ರಲ್ಲಿ ಮತ್ತೆ ಅವರನ್ನೇ ಟಿಕೆಟ್ ಅರಸಿಕೊಂಡು ಬಂತು. ತದನಂತರ ಮೂರು ಬಾರಿ ಅವರು ಉಳ್ಳಾಲ ಕ್ಷೇತ್ರವನ್ನು ಪ್ರತಿನಿಧಿಸಿದರು. ಎರಡು ಬಾರಿ ಪೈಲೂರು ಕೊಟ್ಟ ಸಾಲದಿಂದ ಠೇವಣಿ ಕಟ್ಟಿದರು. ಗೆದ್ದ ಬಳಿಕ ಅದನ್ನು ಇದಿನಬ್ಬರು ಮರಳಿಸಿದರಂತೆ..!
ಸಾಹಿತ್ಯ ಮತ್ತು ರಾಜಕೀಯವನ್ನು ಜೊತೆ ಜೊತೆಯಾಗಿ ನಡೆಸಿದರು.ಚುನಾವಣಾ ಪ್ರಚಾರದಲ್ಲೂ ಹಾಡಿದರು. ವಿಧಾನಸಭೆಯಲ್ಲಿ ತನ್ನ ಚುಟುಕಿನಿಂದಲೇ ಕುಟುಕಿದರು. ‘ಮಾನವ ಸಾಹಿತ್ಯ ಮಾಲೆ’ ಎನ್ನುವ ಪ್ರಕಾಶನವನ್ನು ಕಟ್ಟಿದರು. ಕವಿತಾ ಸಂಕಲನ, ಕಥಾ ಸಂಕಲನಗಳನ್ನು ಬಿಡುಗಡೆ ಮಾಡಿದರು. ಹೀಗೆ ಕನ್ನಡದ ಸೇವೆಯ ಜೊತೆ ಜೊತೆಗೇ ಬೆಳೆದರು. ಕಾಸರಗೋಡಿಗಾಗಿ ಧ್ವನಿಯೆತ್ತಿದ್ದರು. ಐಕ್ಯಗಾನದ ಕರೆ ನೀಡಿದರು. ಅವರು ಕಯ್ಯಿರ ಕಿಂಞಣ್ಣ ರೈಯವರ ‘ಐಕ್ಯಗಾನ’ ಹಾಡನ್ನು ಸುಮಾರು 4000 ಬಾರಿ ಹಾಡಿದ್ದ ರಂತೆ.ಅದನ್ನು ಆಗಾಗ ಹೆಮ್ಮೆಯಿಂದ ಸ್ಮರಿಸುತ್ತಿದ್ದರು.ಹಲೀಮಮ್ಮ:ಇದಿ ನಬ್ಬರ ಮನೆಗೆ ಎರಡು ಹೆಸರು ಗಳಿತ್ತು. ಒಂದು ಕಾ ವ್ಯಶ್ರೀ. ಇ ನ್ನೊಂದು ಹಲೀ ಮಾ ಮಂ ಝಿಲ್. ಹಲೀ ಮಮ್ಮ ಇದಿ ನಬ್ಬರ ಪತ್ನಿ. ಮೊದಲ ಬಾರಿ ಚುನಾ ವಣೆ ಯಲ್ಲಿ ಆರ್ಥಿ ಕವಾಗಿ ಕಂಗೆ ಟ್ಟಾಗ ಅವರಿಗೆ ಆತ್ಮ ವಿಶ್ವಾಸ ತುಂಬಿದ ಧೀರ ಮಹಿಳೆ. ತೆಂಗಿನ ನಾರುಗಳಿಂದ ಹಗ್ಗ ಮಾಡಿ ಮನೆಯ ಸಂಸಾರವನ್ನು ತೂಗಿಸಿದರು. ತನ್ನ ಎಲ್ಲ ಮಹತ್ತ್ವದ ಘಟ್ಟಗಳಲ್ಲಿ ಪತ್ನಿಯ ಸಲಹೆಯನ್ನು ಪಡೆಯುತ್ತಿದ್ದರು ಇದಿನಬ್ಬ. 80ರ ದಶಕದಲ್ಲಿ ಅನಿರೀಕ್ಷಿತವಾಗಿ ಅವರಿಗೆ ಟಿಕೆಟ್ ಸಿಕ್ಕಿದಾಗ, ಅವರು ಪತ್ನಿಯ ಸಲಹೆಯ ಬಳಿಕವೇ ಚುನಾವಣೆಗೆ ನಿಂತಿದ್ದರು.ಇದಿನಬ್ಬರು ಸತತ ಮೂರು ಬಾರಿ ಶಾಸಕರಾದರು. ಜೀವನದ ಕೊನೆಯ ಘಟ್ಟದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದರು. ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದುಕೊಂಡರು. ಆದರೆ ಒಂದು ವಿಶೇಷವೆಂದರೆ ತನ್ನ ಜೀವನದಲ್ಲಿ ಅವರು ‘ನೂರು ರೂ.’ಗಿಂತ ದೊಡ್ಡ ನೋಟನ್ನು ನೋಡಿಯೇ ಇಲ್ಲ. ಅವರ ಕಿಸೆಯಲ್ಲಿ ನೂರಕ್ಕಿಂತ ಜಾಸ್ತಿ ಹಣ ಇದ್ದಿರಲೇ ಇಲ್ಲವಂತೆ. ಜೀವನದ ಕಟ್ಟ ಕಡೆಯ ದಿನಗಳಲ್ಲೂ ಅವರಿಗೆ ‘ನೂರು ರೂ.’ ಅತಿ ದೊಡ್ಡ ಹಣವಾಗಿತ್ತು. ಅದಕ್ಕೊಂದು ಕಾರಣವಿತ್ತು. ಇದಿನಬ್ಬರ ಎಲ್ಲ ಹಣದ ವ್ಯವಹಾರವನ್ನು ಹಲಿ ಮಮ್ಮ ಅವರೇ ನೋಡಿಕೊಳ್ಳು ತ್ತಿದ್ದರು. 50 ರೂ. ಬೇಕಾದರೂ ಅದನ್ನು ಪತ್ನಿಯಿಂದಲೇ ಕೇಳಿ ಇಸಿದು ಕೊಳ್ಳುತ್ತಿದ್ದರು. ಆದುದರಿಂದ ಅವರಿಗೆ ಹಣ ವನ್ನು ಜೊತೆಗೆ ಇಟ್ಟುಕೊಳ್ಳುವ ಅನಿವಾರ್ಯ ಸ್ಥಿತಿಯೇ ಬರಲಿಲ್ಲ.
ವಿಪರ್ಯಾಸವೆಂದರೆ, ಅವರಿಗೆ 90 ವರ್ಷ ಪೂರ್ಣವಾದ ಸಂದರ್ಭ ದಲ್ಲಿ ಒಂದು ಸಣ್ಣ ಸಮಾ ರಂಭ ಇಟ್ಟುಕೊಳ್ಳುವುದು ಎಂದು ಅವರ ಕುಟುಂಬ ಕಾರ್ಯಕ್ರಮವನ್ನು ಹಾಕಿತ್ತು. ಆದರೆ ಅನಿರೀಕ್ಷಿತವಾಗಿ ಅವರು ತೀವ್ರ ಅನಾರೋಗ್ಯದಿಂದ ಆಸ್ಪತ್ರೆ ಸೇರಿದರು. ಇನ್ನೇನು ಇದಿನಬ್ಬರು ಬದುಕು ವುದಿಲ್ಲ ಎನ್ನುವಂತಹ ಸ್ಥಿತಿ ನಿರ್ಮಾಣವಾಯಿತು. ಆದರೆ ಅದರ ಮರುದಿನ ಹಲೀಮಮ್ಮ ಅವರು ಮನೆ ಯಲ್ಲಿ ಹೃದಯಾಘಾತ ದಿಂದ ಕುಸಿದರು. ಇದಿನಬ್ಬ ಇರುವ ಆಸ್ಪತ್ರೆಯನ್ನೇ ಸೇರಿದರು. ಅವರಿಬ್ಬರ ಮಧ್ಯೆ ಒಂದು ಪರದೆ ಮಾತ್ರ ಅಡ್ಡವಾಗಿತ್ತು. ತನ್ನ ಪಕ್ಕದಲ್ಲೇ ಹಲೀಮಮ್ಮ ಸಾವು ಬದುಕಿನೊಂದಿಗೆ ಒದ್ದಾಡುತ್ತಿರುವುದು ಇದಿನಬ್ಬರಿಗೆ ತಿಳಿದಿರಲಿಲ್ಲ. ಅದನ್ನು ತಿಳಿ ಸುವಂತೆಯೂ ಇರಲಿಲ್ಲ. ಕೊನೆಗೂ ಹಲೀಮಮ್ಮ ಪ್ರಾಣ ಬಿಟ್ಟರು. ಇದಾದ ಒಂದೇ ವರ್ಷದಲ್ಲಿ ಇದಿನಬ್ಬರೂ ಇಹಲೋಕ ತ್ಯಜಿಸಿದರು.
ತನ್ನ ರಾಜಕೀಯ ಬದುಕಿನಲ್ಲಿ ಹತ್ತು ಹಲವು ಸವಾಲುಗಳನ್ನು ಎದುರಿಸಿದ್ದರು ಇದಿನಬ್ಬರು. 70ರ ದಶಕದಲ್ಲಿ ಮಂಗಳೂರಿನ ಕಾಳಸಂತೆಕೋರರಿಗೆ ಕಠಿಣ ಎಚ್ಚರಿಕೆ ನೀಡಿದವರು ಇದಿನಬ್ಬ. ‘‘ಮುಂದಿನ ಬಾರಿ ಚುನಾವಣೆಯಲ್ಲಿ ನೋಡಿಕೊಳ್ಳುತ್ತೇವೆ’’ ಎಂದು ವ್ಯಾಪಾರಿಗಳು ಬೆದರಿಸಿದಾಗ ‘‘ನಾನು ಚುನಾವಣೆಗೆ ನಿಲ್ಲುವುದೇ ಇಲ್ಲ’’ ಎಂದಿದ್ದರು. ಆದರೆ ಬಳಿಕ ಚುನಾವಣೆಯಲ್ಲಿ ನಿಂತು ಗೆದ್ದಿದ್ದರು. ನಿಜಲಿಂಗಪ್ಪ- ಇಂದಿರಾಗಾಂಧಿ ನಡುವೆ ಬಿರುಕು ಬಂದಾಗ ಕಂಗೆಟ್ಟವರು ಇದಿನಬ್ಬ. ಯಾವುದೇ ಚೇಲಾಗಳು, ರೌಡಿಗಳು, ಗಾಡ್‌ಫಾದರ್‌ಗಳು ಇಲ್ಲದೇ ರಾಜಕೀಯ ಪ್ರವೇಶಿಸಿದವರು ಇದಿನಬ್ಬ. ಆದರೆ ಕಾಂಗ್ರೆಸ್‌ನಲ್ಲಿ ನಿಧಾನಕ್ಕೆ ಅದುವೇ ಗೆಲುವು ಸಾಧಿಸತೊಡಗಿದಾಗ 67ರ ಬಳಿಕ ಶಾಶ್ವತವಾಗಿ ಮನೆ ಸೇರಿದರು. ರಾಜಕೀಯದಿಂದ ದೂರವಿರುವುದು ಸರಿ ಎಂದು ಭಾವಿಸಿದಾಗಲೇ, 80ರ ದಶಕದಲ್ಲಿ ರಾಜೀವ್‌ಗಾಂಧಿ ಸ್ವತಃ ಗುರುತಿಸಿ ಇದಿನಬ್ಬರಿಗೆ ಟಿಕೆಟ್ ನೀಡಿದರು.
ತನ್ನ ಮಕ್ಕಳಿಗೆ ಇದಿನಬ್ಬರು ಯಾವತ್ತೂ ಹೇಳುತ್ತಿದ್ದುದು ಒಂದೇ ‘‘ನೀವು ಯಾರೊಂದಿಗೂ ಶಾಸಕ ಇದ್ದಿನಬ್ಬರ ಮಗ ಎಂದು ಹೇಳಬೇಡಿ. ರಾಜಕಾರಣಿ ಇದಿಬ್ಬರ ಮಗ ಎಂದೂ ಹೇಳ ಬೇಡಿ. ಕನ್ನಡದ ಕವಿ ಬಿ.ಎಂ. ಇದಿನಬ್ಬರ ಮಗ ಎಂದು ಹೇಳಿ. ನಿಮಗೆ ಗೌರವ ಸಿಗುತ್ತದೆ’’ ಅವರ ಇಬ್ಬರು ಮಕ್ಕಳೂ ತಂದೆಯ ಸ್ಥಾನವನ್ನು ದುರುಪಯೋಗ ಪಡಿಸಿ ರಾಜಕೀಯ ಪ್ರವೇಶಿಸದೇ ತಮ್ಮ ತಮ್ಮ ಬೇರೆ ಬೇರೆ ಹಾದಿಯನ್ನು ಹಿಡಿದರು. ಇದಿನಬ್ಬರಿಗೆ ಮನಸ್ಸು ಮಾಡಿದ್ದರೆ ತಮ್ಮ ಮಕ್ಕಳನ್ನೇ ರಾಜಕಾರಣಿಗಳಾಗಿ ಬೆಳೆಸಬಹುದಿತ್ತು, ಅಥವಾ ಅವರಿಗೆ ಒಂದಿಷ್ಟು ಆಸ್ತಿಪಾಸ್ತಿಗಳನ್ನಾದರೂ ಮಾಡಿಕೊಡಬಹುದಿತ್ತು. ಆದರೆ ಅದನ್ನೇನೂ ಮಾಡಿರಲಿಲ್ಲ. ಅವರು ತೀರಿ ಹೋದಾಗ ಇದ್ದುದು ಅಂಗೈ ಅಗಲದ ಜಾಗದಲ್ಲಿ ಒಂದು ದೊಡ್ಡ ಹೆಂಚಿನ ಮನೆ. ಅದರ ಅಂಗಳದಲ್ಲೇ ತನ್ನ ಮಗಳಿಗೆ ಪುಟ್ಟ ಮನೆಯನ್ನು ಕಟ್ಟಿಸಿಕೊಟ್ಟಿದ್ದರು.
ಮೂರು ಬಾರಿ ಶಾಸಕರಾದ ಒಬ್ಬ ಮುಸ್ಲಿಂ ಜನಪ್ರತಿನಿಧಿ ಸಚಿವ ಸ್ಥಾನವನ್ನು ಚಿಟಿಕೆ ಹೊಡೆದು ಪಡೆಯಬಹುದಿತ್ತು. ಆದರೆ ತನ್ನ ಸ್ವಾಭಿಮಾನವನ್ನು ಒತ್ತೆಯಿಟ್ಟು ನಾಯಕರನ್ನು ಓಲೈಸುವುದು ಅವರಿಂದ ಸಾಧ್ಯವಿರಲಿಲ್ಲ.ಇದಿನಬ್ಬರು ತನ್ನನ್ನು ತಾನು ‘‘ಮದರಸದ ವಿದ್ಯಾರ್ಥಿ’ ಎಂದು ಕರೆದುಕೊಳ್ಳುತ್ತಿದ್ದರು. ತನ್ನ ಬಾಲ್ಯದಲ್ಲಿ ಪ್ರಭಾವ ಬೀರಿದ ಒಬ್ಬರೇ ಒಬ್ಬ ಧಾರ್ಮಿಕ ಗುರು ಸೀದಿ ಕುಂಞ ಮುಸ್ಲಿಯಾರ್‌ರನ್ನು ಪದೇ ಪದೇ ನೆನೆಸಿಕೊಳ್ಳುತ್ತಿದ್ದರು. ಐದು ಹೊತ್ತು ಬಿಡದೇ ನಮಾಝ್ ಮಾಡುತ್ತಿದ್ದರು. ಆದರೆ ಎಂದಿಗೂ ಅವರು ಕೇವಲ ಮುಸ್ಲಿಮ್ ನಾಯಕರಾಗಿ ಉಳಿಯಲಿಲ್ಲ. ಇಂದು ಇದಿನಬ್ಬರನ್ನು ಮುಸ್ಲಿಮರಿಗಿಂತ ಹೆಚ್ಚಾಗಿ ಮುಸ್ಲಿಮೇತರರೇ ನೆನೆದುಕೊಳ್ಳುತ್ತಾರೆ.
ಉಳ್ಳಾಲದಲ್ಲಿ ಮುಸ್ಲಿಮರೇ ಬಹುಸಂಖ್ಯಾತರು. ಆದರೆ ಮೂರು ಬಾರಿ ಮುಸ್ಲಿಂ ಲೀಗ್ ಎದುರುಗಡೆ ಚುನಾವಣೆಗೆ ನಿಂತು ಗೆದ್ದರು. ಮೂರು ಬಾರಿಯೂ ಮುಸ್ಲಿಂ ಲೀಗ್ ಠೇವಣಿ ಕಳೆದುಕೊಂಡಿತು. ಇದು ಇದಿನಬ್ಬರ ಶಕ್ತಿ.ಇದಿನಬ್ಬರೆಂದರೆ ಕನ್ನಡದ ಶಕ್ತಿ. ಕನ್ನಡದ ಕಂಠ. ಆ ಕಂಠದಿಂದ ಹೊರಹೊಮ್ಮಿದ ಐಕ್ಯಗಾನ ಇಂದಿಗೂ ಕರಾವಳಿಯಾದ್ಯಂತ ಅಲೆಅಲೆಯಾಗಿ ತರಂಗಗಳನ್ನು ಎಬ್ಬಿಸುತ್ತಲೇ ಇದೆ. ಅದನ್ನು ಮುಂದೆಯೂ ಉಳಿಯುವಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ.
ಲೇಖನ- ಪ್ರೊ. ಕೆ. ಹರಿನಾರಾಯಣ ಭಟ್
ಕೃಪೆ-ವಾರ್ತಾ ಭಾರತಿ
No comments:
Post a Comment