ಮಂಗಳೂರು-ಕಾರ್ಕಳ ರಸ್ತೆಯಲ್ಲಿ
ಮಂಗಳೂರಿನಿಂದ 35 ಕಿಮೀ ದೂರದಲ್ಲಿರುವ ಚಿಕ್ಕ ಪಟ್ಟಣ ಮೂಡಬಿದರೆ ಜೈನಕಾಶಿ ಎಂದೇ ಖ್ಯಾತವಾಗಿದೆ.
17ನೆಯ ಶತಮಾನದಲ್ಲಿ ಮೂಡಬಿದರೆ ಪುತ್ತಿಗೆಯ ಚೌಟರಸರ ರಾಜಧಾನಿಯಾಗಿ ಮೆರೆದಿತ್ತು, ಪೋರ್ಚುಗೀಸರ ವಿರುದ್ದ ಹೋರಾಡಿದ ವೀರ ಮಹಿಳೆ ಉಳ್ಳಾಲದ ರಾಣಿ ಅಬ್ಬಕ್ಕ ಕೂಡ ಇದೇ ಊರಿನಲ್ಲಿ ಹುಟ್ಟಿದ್ದಳು. ೧೯೯೭ರಲ್ಲಿ ಅವಿಭಜಿತ ದಕ್ಷಿಣ
ಕನ್ನಡವನ್ನು ವಿಭಾಗಿಸುವ ಮುನ್ನ ಕಾರ್ಕಳ ತಾಲೂಕಿಗೆ ಸೇರಿದ್ದ ಮೂಡುಬಿದಿರೆಯು ಈಗ
ಮಂಗಳೂರಿನ ಭಾಗವಾಗಿದೆ.ಮೂಡುಬಿದಿರೆಯು ಬಹಳ ಹಿಂದಿನಿಂದಲೂ ವ್ಯಾಪಾರ ವಾಣಿಜ್ಯದಲ್ಲಿ ಹೆಸರುವಾಸಿಯಾಗಿದ್ದ
ಪಟ್ಟಣ. ಇಲ್ಲಿನ ವ್ಯಾಪಾರಿಗಳು ದೇಶ-ವಿದೇಶಗಳ ವಿವಿಧ ಸ್ಥಳಗಳ ವ್ಯಾಪಾರಿಗಳೊಂದಿಗೆ
ವ್ಯವಹಾರ ಸಂಬಂಧ ಇಟ್ಟುಕೊಂಡಿದ್ದರೆಂದು ತಿಳಿದಿದೆ. ಇದಕ್ಕೆ ಸಣ್ಣ ಉದಾಹರಣೆಯಾಗಿ ಸಾವಿರ
ಕಂಭದ ಬಸದಿಯ ಗೋಡೆಯ ಮೇಲೆ ಕೆತ್ತಲಾದ ಡ್ರಾಗನ್ ಪ್ರಾಣಿಯ ಉಬ್ಬು ಚಿತ್ರವನ್ನು
ಗಮನಿಸಬಹುದು. ಆ ಕಾಲದಲ್ಲೇ ವ್ಯಾಪಾರಿಗಳು ಚೀನಾದೊಂದಿಗೆ ವ್ಯಾಪಾರ
ಸಂಬಂಧವಿಟ್ಟುಕೊಂಡಿದ್ದರೆಂದು ಇದರಿಂದ ತಿಳಿಯುತ್ತದೆ.
ಸಾವಿರ ಕಂಬದ ಬಸದಿ |
ಫಲ್ಗುಣಿ ನದಿಯ ದಂಡೆಯ ಮೇಲಿರುವ
ಮೂಡಬಿದರೆಯಲ್ಲಿ 18 ಬಸದಿಗಳು ಹಲವಾರು ದೇವಾಲಯಗಳಿವೆ. ಈ ಪೈಕಿ ಸಾವಿರ ಕಂಬಗಳ ಬಸದಿ
ಎಂದು ಖ್ಯಾತವಾಗಿರುವ ತ್ರಿಭುವನತಿಲಕ ಚೂಡಾಮಣಿ ಚಂದ್ರಪ್ರಭಾಸ್ವಾಮಿಯ ಮಹಾಚೈತ್ಯಾಲಯ
ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಶ್ರೇಷ್ಠ ವಾಸ್ತು ವಿನ್ಯಾಸಗಳನ್ನು
ಒಳಗೊಂಡ ಈ ಬಸದಿಯನ್ನು 1431ರಲ್ಲಿ ನಿರ್ಮಿಸಿಲಾಯಿತೆಂದು ಗದ್ದಿಗೆ ಮಂಟಪದಲ್ಲಿರುವ
ಶಿಲಾಕೆತ್ತನೆ ತಿಳಿಸುತ್ತದೆ.
ಬಸದಿಯ ಒಳನೋಟ |
ಜೈನ ಬಸದಿಯ ವಿಹಂಗಮ ನೋಟ |
ಮೂಡುಬಿದಿರೆಯು ಹಿಂದೆ ಚೌಟ ಅರಸರ ಆಳ್ವಿಕೆಗೆ ಒಳಪಟ್ಟಿತ್ತು. ಇಲ್ಲಿನ ಚೌಟರ
ಅರಮನೆಯಲ್ಲಿ ಇಂದಿಗೂ ಅರಸು ವಂಶಸ್ಥರು ವಾಸವಾಗಿದ್ದಾರೆ. ಜೈನ ವ್ಯಾಪಾರಿಗಳೂ
ಮೂಡುಬಿದಿರೆಯಲ್ಲಿ ಸಾಕಷ್ಟಿದ್ದು, ದೇಶ ವಿದೇಶಗಳಲ್ಲಿ ವ್ಯಾಪಾರೀ ಸಂಬಂಧವನ್ನು
ಹೊಂದಿದ್ದರು. ಇಲ್ಲಿನ ಜೈನ ವ್ಯಾಪಾರಿಗಳು ಸೇರಿ ಕಟ್ಟಿದ ಸಾವಿರ ಕಂಭದ ಬಸದಿಯು
ಅತ್ಯಾಕರ್ಷಕ ವಾಸ್ತು ಕೃತಿ. ಲಾತ್ಮಕವಾದ ಬಸದಿಯಲ್ಲಿ
ಶಿಲ್ಪಾಲಂಕಾರ ಮನಸೆಳೆಯುತ್ತದೆ. ಇಲ್ಲಿರುವ ಕಂಬಗಳು ಒಂದಕ್ಕಿಂತ ಒಂದು ಭಿನ್ನವಾಗಿದ್ದು
ಅನುಪಮವಾಗಿವೆ. ಕಂಬಗಳಲ್ಲಿ ಮತ್ತು ಭಿತ್ತಿಗಳಲ್ಲಿ ಕೆತ್ತಲಾಗಿರುವ ಲತೆ, ಹೂ,
ಹಣ್ಣುಗಳು, ಮೃಗಪಕ್ಷಿಗಳ ಮತ್ತು ದೇವ
ದಾನವರ ಪ್ರತಿಮೆಗಳು ಆಸ್ತಿಕರು ನಾಸ್ತಿಕರನ್ನು ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾಗಿವೆ.
ಇಲ್ಲಿರುವ ಆರೂವರೆ ಅಡಿಯ ಮಿರಮಿರನೆ
ಮಿನುಗುವ ಅಷ್ಟಮ ತೀರ್ಥಂಕರರ ಮೂರ್ತಿ ಮನೋಹರವಾಗಿದೆ.
ಶಿಲ್ಪಿಯ ಕಲಾವಂತಿಕೆ, ನೈಪುಣ್ಯ
ಮೆಚ್ಚದವರೇ ವಿರಳ. ಬಸದಿಯ ಮುಂದೆ 50 ಅಡಿ ಎತ್ತರದ ಮಾನಸ್ತಂಭವಿದೆ. ಭವ್ಯ ಕಲಾತ್ಮಕವಾದ
ಏಕಶಿಲಾ ಕಂಬ ಉತ್ತರ ಭಾರತ ಅದರಲ್ಲೂ ಹಿಮಾಚಲ ಪ್ರದೇಶದ ಸ್ತೂಪಗಳಿಂದ ಪ್ರಭಾವಿತವಾಗಿದೆ
ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಪ್ರತಿವರ್ಷ ಚೈತ್ರಮಾಸದ ಹುಣ್ಣಿಮೆಯ ದಿನ ಇಲ್ಲಿ
ರಥೋತ್ಸವ ನಡೆಯುತ್ತದೆ.
ಇಲ್ಲಿ ಹಳೆ ಬಸದಿ ಎಂದು ಕರೆಸಿಕೊಂಡ
ಗುರು ಬಸದಿ ಇದೆ. 35 ಜಿನ ಬಿಂಬಗಳು ಇಲ್ಲಿ ಸಂರಕ್ಷಿತವಾಗಿವೆ. ಸನಿಹದಲ್ಲೇ ಹನುಮಂತ
ಗುಡಿಯೂ ಇದೆ.
ವರಬಲದಿಂದ ಗರ್ವಿತನಾಗಿ ನರರನ್ನೂ,
ದೇವತೆಗಳನ್ನೂ, ಋಷಿ ಮುನಿಗಳನ್ನೂ ಕಾಡಿದ ಮಹಿಷನ ಕೊಂದ ಚಾಮುಂಡೇಶ್ವರಿ
(ಮಹಿಷಾಸುರಮರ್ದಿನಿ), ಗಣಪನ ತಾಯಿ ಗೌರೀ,
ಕೊಳಲು ಹಿಡಿದ ಗೋಪಾಲಕೃಷ್ಣ ಹಾಗೂ ಸಂಕಟ ಪರಿಹರಿಸುವ ವೆಂಕಟರಮಣ
ದೇವಾಲಯಗಳೂ ಇಲ್ಲಿವೆ.ಮಹಾಲಸದೇವಾಲಯವೂ ಮನಮೋಹಕವಾಗಿದೆ. ಕಾರ್ಕಳಕ್ಕೆ ಕೇವಲ 20 ಕಿಲೋ
ಮೀಟರ್ ದೂರದಲ್ಲಿದೆ ಮೂಡಬಿದರೆ.
ಇತ್ತೀಚಿನ ವರ್ಷಗಳಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ದಾಪುಗಾಲಿಡುತ್ತಿರುವ ಮೂಡುಬಿದಿರೆಯು ಶ್ರೀಮಂತವಾದ ಇತಿಹಾಸವನ್ನು ಹೊಂದಿದೆ. ಜೈನಕಾಶಿ
ಎಂದು ಪ್ರಸಿದ್ಧವಾಗಿರುವ ಮೂಡುಬಿದಿರೆಯಲ್ಲಿ ೧೮ ದೇವಸ್ಥಾನಗಳು, ೧೮ ಜೈನ ಬಸದಿಗಳು
ಮತ್ತು ೧೮ ಕೆರೆಗಳು ಇವೆ. ಇಲ್ಲಿನ ಬಸದಿಗಳಲ್ಲಿ ಸಾವಿರ ಕಂಭದ ಬಸದಿಯು
ವಿಶ್ವಪ್ರಸಿದ್ಧವಾದುದು. ಗುರು ಬಸದಿಯು ಜೈನರ ಪವಿತ್ರ ಗ್ರಂಥಗಳಾದ ಶ್ರೀಧವಳ ಮತ್ತು ಮಹಾ ಧವಳಗಳ ಹಸ್ತಪ್ರತಿಗಳನ್ನು ಹೊಂದಿದ್ದು, ಆ ಕಾರಣದಿಂದ ಸಿದ್ಧಾಂತ ಬಸದಿ ಎಂದೂ ಕರೆಯಲ್ಪಡುತ್ತದೆ.
No comments:
Post a Comment