ಅತ್ಯಂತ ಕಡಿಮೆ ಇಂಗ್ಲಿಷ್ ಬರುತ್ತಿದ್ದ ಇಟಲಿ ದೇಶದ ಅವನು, ಗೌರವಾನ್ವಿತ ಜೆಸುಯಿಟ್ ಪಾದ್ರಿಗಳ ಜೊತೆ ಬಾಳುತ್ತಿದ್ದ ಒಬ್ಬ ಬ್ರದರ್ ಮಾತ್ರ ಆಗಿದ್ದ. ಕಡಲು ದಾಟಿ ಇಲ್ಲಿಗೆ ಬಂದಿದ್ದ. ಅವನು ನಗುವುದು ಕಡಿಮೆಯಾದರೂ, ಮುಖದಲ್ಲಿ ಅದನ್ನು ಒಮ್ಮೆ ಕಂಡರೆ, ಮರೆಯಲು ಸಾಧ್ಯವಿಲ್ಲದಂತೆ ಮೂಡುತ್ತಿತ್ತು. ಹಣೆಯು ಬೆಳೆದು, ಕೂದಲು ಹಿಂಜರಿದು ಮುಖ ಅಗಲವಾಗಿತ್ತು. ತುಳುನಾಡಿನ ಗುಡ್ಡವೊಂದರ ತುದಿಯ ಕ್ರಿಸ್ತ ಪ್ರಾರ್ಥನಾ ಮಂದಿರದ ಗೋಡೆಗಳಲ್ಲಿ ಹಗಲುಪೂರ್ತಿ ಅವನು ಚಿತ್ರಗಳನ್ನು ಮೂಡಿಸುತ್ತಿದ್ದ. ಹತ್ತಿರದಲ್ಲಿ ಕಾಣುತ್ತಿದ್ದ ಕಡಲಿನಲ್ಲಿ ಸೂರ್ಯ ಮುಳುಗತೊಡಗಿದಾಗ, ಮಾತು ಮಿತವಾಗಿದ್ದ ಈ ಸೂಕ್ಷ್ಮ ಮನಸ್ಸಿನ ಜೀವಿ ಕೆಲಸ ನಿಲ್ಲಿಸುತ್ತಿದ್ದ. ಮಂದಿರದೆದುರಿನ ಇಳಿಜಾರಿನಲ್ಲಿ ಕತ್ತಲು ದಾರಿಯನ್ನು ಕರಗಿಸುವವರೆಗೂ ವಾಕಿಂಗ್ ಹೋಗುತ್ತಿದ್ದ. ಆಗ ಎದುರು ಸಿಕ್ಕ ಯಾರೋ ಅವನನ್ನು ಕೇಳಿದರಂತೆ, ಮಂಗಳೂರಿನ ಈ ಚಾಪೆಲ್ ಈಗ ಬೈಬಲಿನ ಕಲಾಶಾಲೆಯಾಗಿದೆ. ನೀನು ಆ ಸಂತರನ್ನೆಲ್ಲ ಪ್ರತ್ಯಕ್ಷ ಕಂಡಂತೆ ಚಿತ್ರಿಸಿದೆ. ನಡುನಡುವೆ ದೇವಸಾಮ್ರಾಜ್ಯದ ದೇವದೂತರನ್ನು ಕಾಣಿಸಿದೆ. ಆದರೆ ಅವರಲ್ಲೊಬ್ಬನನ್ನು ಕಪ್ಪಾಗಿ ಏಕೆ ಮಾಡಿದೆ?.
ಬ್ರದರ್ ಅಂಟೊನಿಯೊ ಮೊಸ್ಕೆನಿ ಇದ್ದಕ್ಕಿದ್ದಂತೆ ಮರುನುಡಿ ಅಂದ, ‘ಹೌದು, ಬಿಳಿ ಏಂಜೆಲ್ಸ್ ಇರುವುದಾದರೆ ಕಪ್ಪು ಏಂಜೆಲ್ಸ್ ಏಕೆ ಇರಬಾರದು?
'ದಪ್ಪ ಬಟ್ಟೆಯ ಮೇಲೆ ಎಣ್ಣೆಯಲ್ಲಿ ಕಲಸಿದ ಬಣ್ಣ, ಗೋಡೆಯ ಒದ್ದೆ ಸುಣ್ಣಕ್ಕೆ ನೀರಲ್ಲಿ ಕರಗಿಸಿದ ಬಣ್ಣ, ಒಣಗಿದ ಗೋಡೆಯಾಗಿದ್ದರೆ ಅಂಟು ಸೇರಿಸಿದ ಬಣ್ಣ - ಹೀಗೆ ಹಲವು ರೀತಿಗಳಲ್ಲಿ ಈ ಕಲಾವಿದ ಚಿತ್ರತಂತ್ರ ಪರಿಣಿತನಿದ್ದ. ಸಂತ ಅಲೋಶಿಯಸ್‌ಗೆ ಅರ್ಪಿಸಿದ ಆ ಪ್ರಾರ್ಥನಾ ಮಂದಿರದ ಹತ್ತಾರು ಆಳೆತ್ತರದ ಗೋಡೆಗಳಿಗೆ ಹಸಿ ಸುಣ್ಣ ಒಣಗುವ ಮೊದಲೇ ಬ್ರಶ್ ಓಡಿಸುವ ವೇಗಶಾಲಿಗಳು ಬೇಕಿತ್ತು. ಕೊರಳು ಪೂರ್ತಿ ತಿರುಗಿಸಿ ನೋಡಬೇಕಾದ ಆ ಅಪಾರ ಎತ್ತರದ ಛಾವಣಿಗೆ ತೈಲಚಿತ್ರಗಳ ಕ್ಯಾನ್ವಾಸ್‌ಗಳನ್ನು ಒಯ್ದು ಕೂರಿಸುವ ಧೀರರು ಬೇಕಿತ್ತು. ಯೇಸುವಿನ ಬದುಕು-ಬೆಳಕು, ಧರ್ಮದ ದಾರಿ ಹಿಡಿದ ಸಂತರು, ಪ್ಲೇಗ್ ರೋಗಿಗಳಿಗಾಗಿ ಸತ್ತುಹೋದ ಎಳೆರಾಜ ಅಲೋಶಿಯಸ್, ಎರಡು ಸಾವಿರ ವರ್ಷಗಳಾಚೆ ಯೇಸುವನ್ನು ಕಂಡಿದ್ದ ಮಧ್ಯಪ್ರಾಚ್ಯದ ರಾಶಿ ಜನತೆ - ಹೀಗೆ ನೂರಾರು ಮುಖಗಳು ದೇಹಾಕಾರಗಳು ಮಂದಿರದೊಳಗೆ ಮೂಡಬೇಕಿತ್ತು. ಇದ್ದುದು ಒಟ್ಟು ಎಂಟೂ ಮುಕ್ಕಾಲು ಸಾವಿರ ಚದರ ಅಡಿ. ಒಂದಿಂಚೂ ಬಿಡದೆ ಬಣ್ಣ ಅರಳಿಸಿದ್ದ ಆ ಬ್ರದರ್. ಇಷ್ಟರಲ್ಲಿ ಇಪ್ಪತ್ತನೆಯ ಶತಮಾನವು ಒಂದು ವರುಷದ ಮಗುವಾಗಿ ಅಂಬೆಗಾಲಿಕ್ಕುತ್ತಿತ್ತು.
ಅಂಟೊನಿಯೊ ಇಟಲಿಗೆ ಮರಳಬೇಕಿತ್ತು. ಮಂಗಳೂರು ಸುತ್ತಲಿನ ದೇವಮಂದಿರಗಳ ಗೋಡೆಗಳು, ಮುಂಬೈ ಕೊಚ್ಚಿಗಳ ಪವಿತ್ರ ಮಾಡುಗಳು ಆತನನ್ನು ಹೋಗಲು ಬಿಡದೆ ಕೂಡಿ ಹಾಕಿದುವು. ಕೊಚ್ಚಿಯ ಕ್ಯಾಥೆಡ್ರಲ್ ಬಣ್ಣಗಳಿಂದ ಪೂರ್ತಿಯಾಗುವ ಮೊದಲೇ ಮೊಸ್ಕೆನಿಯ ಬದುಕು ಮುಗಿದುಹೋಯಿತು. ಭಾರವಾದ ಭಾರತದ ಭಾಷೆಗಳು, ಮೈಗೆ ಹೊಂದದ ಬಿಸಿ ಹವೆಗಳು, ಇಲ್ಲೆಲ್ಲೂ ಸಿಗದಿದ್ದ ಹುಡಿ ಬಣ್ಣಗಳು, ಹಗಲೆಲ್ಲ ಗಂಟೆಗಟ್ಟಲೆ ಬ್ರದರ್‌ನನ್ನು ಹಿಡಿದುಕೊಳ್ಳುತ್ತಿದ್ದ ಅಸಂಖ್ಯ ವರ್ಣದ್ರವ್ಯಗಳ ಹೊಗೆ ವಾಸನೆಗಳು - ಇವೆಲ್ಲ ಆರು ವರ್ಷದ ಇಂಡಿಯಾದ ಬಾಳಲ್ಲಿ ಸವಾಲು ಹಾಕಿದವು. ಯಾವುದೋ ಗುಣಪಡಿಸಲಾಗದ ಭೇದಿ ಒಂದು ನೆಪವಾಯಿತು. ಐವತ್ತೊಂದು ವರ್ಷದ ಬಾಳು ೧೯೦೫ರಲ್ಲಿ ಮುಗಿದುಹೋಯಿತು.
ಲಕ್ನೋದ ‘ಇಂಟಾಕ್' ಎಂಬುದು ಭಾರತೀಯ ಕಲಾಕೃತಿಗಳ ರಕ್ಷಣೆಗೇ ಇರುವ ಸಂಸ್ಥೆ. ವಿಜ್ಞಾನ - ತಂತ್ರಜ್ಞಾನ - ಕಲೆಯ ತಿಳುವಳಿಕೆಗಳನ್ನೆಲ್ಲ ಹೊಂದಿಸಿ, ಮೊಸ್ಕೆನಿ ಚಿತ್ರಗಳಿಗಾದ ಕಾಲದ ಹೊಡೆತಕ್ಕೆ ಇವರು ಚಿಕಿತ್ಸೆ ನಡೆಸಿದರು. ಅವನಿಗೆ ಚಿತ್ರ ಬಿಡಿಸಲು ಎರಡೂವರೆ ವರ್ಷ ಬೇಕಾಗಿದ್ದರೆ, ನೂರು ವರ್ಷದ ಬಳಿಕ ನಡೆದ ರಿಪೇರಿಗೆ ಮೂರೂವರೆ ವರ್ಷ ಬೇಕಾಯಿತು. ಚಿತ್ರಗಳು ನಮ್ಮ ಜತೆ ಉಳಿದುಕೊಂಡವು. ಇಲ್ಲೇ ಉಳಿದುಹೋಗಿ, ಕೊಚ್ಚಿಯ ಮಣ್ಣಲ್ಲೆಲ್ಲೋ ಕರಗಿಹೋದ ಬ್ರದರ್ ಮೊಸ್ಕೆನಿಯ ಮೇಲೆ ಕೂಡಿ ಹಾಕಿದ ಮಣ್ಣರಾಶಿ, ಊರಿದ ಶಿಲುಬೆ ಇದುವರೆಗೆ ಸಿಕ್ಕಿಲ್ಲ.
ಪಶ್ಚಿಮಘಟ್ಟದ ಬುಡದಲ್ಲಿ ಇಟೆಲಿಯ ಮೊಸ್ಕೆನಿ ಕಂಡಿದ್ದ ಹೂಗಳು ಹೆಣೆದುಕೊಂಡು, ಏಂಜೆಲ್ಸ್ - ಸಂತರನ್ನು ಬೆಸೆದು ಮಂಗಳೂರಿನ ಅಲೋಶಿಯಸ್ ಚ್ಯಾಪೆಲ್‌ನ ಉದ್ದಕ್ಕೆ ಮಹಾಮಾಲೆಯಾಗಿ ಹರಡಿಹೋಗಿವೆ. ಹೂ-ಎಲೆಗಳ ಮಾಲೆ ಹೆಣೆಯುವುದು ಯಾವತ್ತೂ ಚಿತ್ರಗಳಲ್ಲಿ ಮೊಸ್ಕೆನಿ ಪ್ರೀತಿ. ಅಪಾರ ಎತ್ತರದ ಮಾಡು ತುಂಬ ಚಿತ್ರಗಳು - ಕಿಟಕಿಗಳಲ್ಲಿ ಬಣ್ಣದ ಗಾಜುಗಳ ಬೆಳಕು - ಮಂದಿರದ ತುಂಬ ದೇವಸ್ವರ್ಗವನ್ನು ತುಂಬಿಕೊಂಡ ಗಾಡಮೌನ.
ಮಕ್ಕಳಾಗಿ ಬಳಿಗೆ ಬನ್ನಿ ಎಂದ ಆ ಸ್ವಾಮಿ. ಬಂದ ಮಕ್ಕಳ ಭಂಗಿ ಒಂದು ಇನ್ನೊಂದಂತೆ ಇಲ್ಲ. ಅಂಟೊನಿಯೊ ಮೊಸ್ಕೆನಿ ಎಂಬ ಈ ಚಿತ್ರಕಾರ ಮಾಡೆಲ್‌ಗಳಿಲ್ಲದೆಯೇ ಅಪಾರ ಮುಖಗಳನ್ನೂ ಅವುಗಳಲ್ಲಿ ದಿವ್ಯತೆಯನ್ನೂ ಮೂಡಿಸಿದ್ದ. ಯಾವ ಚಿತ್ರಕ್ಕು ಸಹಿ ಹಾಕದೆ, ಆ ಕೆಲಸ ದೇವರಿಗೆ ಬಿಟ್ಟ; ತಾನು ಮಗುವಾಗಿ ಉಳಿದ.
ಸಂಸ್ಥೆಯ ಪಾಲಕರಾದ ಸಂತ ಅಲೋಸಿಯಸ್ ಗೊನ್ಜಾಗರವರು ಸಮಾಜ ಸೇವೆಯಲ್ಲಿ ತನ್ನ ಜೀವನವನ್ನು ಕಳೆದು ಬಡ ಜನರ ಹಿತಕ್ಕಾಗಿ ತನ್ನ ದೇಹವನ್ನು ಅರ್ಪಿಸಿದ ಮಹತ್ವದ ಘಟನೆಗಳನ್ನು ಬಿಂಬಿಸುವ ಕಲಾ ಚಿತ್ರಗಳು ಈ ಚ್ಯಾಪಲ್‌ನಲ್ಲಿ ಇದ್ದು, ಪ್ರವಾಸಿಗರ ಕಣ್ಮನ ಸೆಳೆಯುತ್ತವೆ.
No comments:
Post a Comment