ತುಳುನಾಡಿನ ಪ್ರಾಚೀನ ದೇವಾಲಯಗಳಿಗೆಲ್ಲ ಒಂದು ಭವ್ಯ ಪರಂಪರೆಯಿದೆ. ಹಿಂದೆ ಈ
ಪ್ರದೇಶವನ್ನು ಆಳಿದ್ದ ಆಳುಪ, ವಿಜಯನಗರ, ಕೆಳದಿ ಸಂಸ್ಥಾನಗಳಿಂದಲೂ, ಸ್ಥಳೀಯ
ರಾಜವಂಶೀಯರಿಂದಲೂ ಆರಾಧಿಸಲ್ಪಡುತ್ತಿದ್ದ ಅನೇಕ ದೇವಾಲಯಗಳು ಇಲ್ಲಿವೆ. ದೇವಾಲಯಗಳ
ವಿನಿಯೋಗಗಳು ಸಾಂಗವಾಗಿ ನಡೆಯಬೇಕೆಂಬ ಸದುದ್ದೇಶದಿಂದ, ಅಂದಿನ ಅರಸರು ಬಿಟ್ಟುಕೊಟ್ಟ
ದತ್ತಿ ಶಾಸನಗಳ ಸಂಖ್ಯೆ ಅಪರಿಮಿತವಾಗಿದೆ. ಇಲ್ಲಿಯ ತುಂಡರಸರಲ್ಲಿ ಚೌಟರು
ಸುಪ್ರಸಿದ್ಧರು.
ಇವರು ಮೂಲತಃ ಕರಾವಳಿಯ ಉಳ್ಳಾಲದವರಾಗಿದ್ದು, ಮುಂದೆ ಪುತ್ತಿಗೆ,
ಮೂಡಬಿದಿರೆಗಳಲ್ಲಿ ಕೇಂದ್ರಸ್ಥಾನವನ್ನೇರ್ಪಡಿಸಿ ರಾಜ್ಯಭಾರ ಮಾಡುತ್ತಿದ್ದರು. ಇವರು
ಸೋಮನಾಥ ದೇವರ ಭಕ್ತರಾಗಿದ್ದರು. ಆದಕಾರಣದಿಂದ ಇವರು ಆಳಿಕೊಂಡಿದ್ದ ಭಾಗದಲ್ಲಿ ಅನೇಕ
ಸೋಮನಾಥ ದೇವಾಲಯಗಳಿವೆ. ಉಳ್ಳಾಲ, ಪುತ್ತಿಗೆ, ಅಮ್ಮೆಂಬಳ, ಪೆರ್ಮುದೆ, ಪೋರ್ಕೋಡಿ,
ಗುರುಪುರ, ಇರಾ, ನೆಲ್ಲಿತೀರ್ಥ ಮೊದಲಾದ ಸೋಮನಾಥ ದೇವಾಲಯಗಳು ಇಲ್ಲಿವೆ. ಇವುಗಳಲ್ಲಿ ನೆಲ್ಲಿತೀರ್ಥವು ಪವಿತ್ರ ಗುಹಾತೀರ್ಥದ ಸನ್ನಿಧಿಯಲ್ಲಿದ್ದು ಅತಿಮಹಿಮಾನ್ವಿತವಾಗಿದೆ. ಪೂರ್ವಕಾಲದಲ್ಲಿ ಇದು ಜಾಬಾಲಿಮುನಿಯ ಸಿದ್ಧಾಶ್ರಮವಾಗಿತ್ತೆಂದು ಪುರಾಣೋಕ್ತಿಯಿದೆ. ಶ್ರ್‍ಈಕ್ಷೇತ್ರದಲ್ಲಿರುವ ಅರಸರ ಮಂಚ, ಅರಸುಕಟ್ಟೆಗಳು ಇಲ್ಲಿಗೆ ಚೌಟರಸರು ಆಗಾಗ ಭೇಟಿ ಕೊಡುತ್ತಿದ್ದರೆಂಬುದಕ್ಕೆ ಮೂಕಸಾಕ್ಷಿಗಳಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸವನ್ನು ಬರೆದಿರುವ ದಿ. ಗಣಪತಿರಾವ್ ಐಗಳು ತನ್ನ ಕೃತಿಯಲ್ಲಿ ಹೇಳಿರುವ ಕೆಲವು ವಿಷಯಗಳು ಮುಖ್ಯವಾಗಿವೆ. ಕ್ರಿ. ಶ ೧೪೦೩-೧೪೭೦ರ ಅವಧಿಯಲ್ಲಿದ್ದ ಎರಡನೇ ಚೆನ್ನರಾಯ ಚೌಟನು ಒಂದು ಯುದ್ಧಕಾಲದಲ್ಲಿ ಬಂಗರಸರಿಗೆ ಸೈನ್ಯ ಸಹಾಯ ಮಾಡಿ ಜಯವನ್ನು ದೊರಕಿಸಿಕೊಟ್ಟುದಕ್ಕೆ ಮಣೇಲ, ಪೇಜಾವರ, ಮುಂಡ್ಕೂರು ಸೀಮೆಗಳನ್ನು ಉಡುಗೊರೆಯಾಗಿ ಪಡೆದನು.
ಅವನು ಹಿಂತಿರುಗಿ ಬರುವಾಗ ಜಾಬಾಲಿ ಋಷಿಯ ಆಶ್ರಮವಿದ್ದ ಸ್ಥಳದಲ್ಲಿ ಗುಹಾತೀರ್ಥದಲ್ಲಿ ಸ್ನಾನಮಾಡಿ, ಆ ಋಷಿಯ ಪ್ರತಿಷ್ಠೆ ಮಾಡಿದ್ದ ಸೋಮನಾಥೇಶ್ವರ ದೇವರ ದರ್ಶನ ಮಾಡಿಕೊಂಡು ನೆಲ್ಲಿತೀರ್ಥ ಮತ್ತು ಕರಂಬಾರು ಗ್ರಾಮಗಳನ್ನು ಈ ದೇವಸ್ಥಾನಕ್ಕೆ ಉತ್ತಾರ ಬಿಟ್ಟನು ಎಂದು ಹೇಳಲಾಗಿದೆ. ಈಗಲೂ ಕೆಂಜಾರು ಕರಂಬಾರು ಗ್ರಾಮದವರು ಉತ್ಸವದ ಸಮಯದಲ್ಲಿ ಬಂದು ಅಗ್ನಿಕುಳಿಯನ್ನು ನಡೆಸಿಕೊಡುತ್ತಾರೆ. ಇದೇ ಘಟನೆಯನ್ನು ಕರ್ನಲ್ ಮೆಕೆನ್ಜಿಯೆಂಬವನ (೧೭೫೪-೧೮೨೧) ಸಂಗ್ರಹಿಸಿದ್ದ ’ಚೌಟರ ಕೈಪಿಯತ್ತು’ ಎಂಬ ದಾಖಲೆಯಲ್ಲಿಯೂ ಉಲ್ಲೇಖಿಸಲಾಗಿದೆ. ಅಲ್ಲಿ ಈ ಘಟನೆ ನಡೆದ ಕಾಲವನ್ನು ಸ್ವಲ್ಪ ಹಿಂದೆ ಎಂದು ಸೂಚಿಸಲಾಗಿದೆ. ಅಲ್ಲಿ ನೆಲ್ಲಿತೀರ್ಥವನ್ನು ’ಬಿಲ್ವವನ’ ಎಂದಿದೆ.
ಇನ್ನೊಂದು ಘಟನೆ ಕ್ರಿ.ಶ ೧೫೭೪ರಲ್ಲಿ ನೆಲ್ಲಿತೀರ್ಥ ಕ್ಷೇತ್ರದಲ್ಲಿ ನಡೆಯಿತು. ಆಗ ತಾನೆ ತುಳುನಾಡಿನಲ್ಲಿ ಬೇರು ಬಿಡುತ್ತಿದ್ದ ವೀರಶೈವ ಧರ್ಮದವರಿಗೂ, ಬ್ರಾಹ್ಮಣರಿಗೂ ದೇವತಾರಾಧನೆಯ ಕುರಿತು ವಿವಾದವೆದ್ದಿತು. ವಿಜಯನಗರ ಸಾಮ್ರಾಜ್ಯದ ವರ್ಚಸ್ಸು ಇಳಿಮುಖವಾಗಿ, ಕೆಳದಿ ಅರಸರು (ವೀರಶೈವ) ಇಲ್ಲಿ ಆಳ್ವಿಕೆ ಆರಂಭಿಸಿದ ಕಾಲವದು. ವೀರಶೈವರು ಬಾಳೇಹಳ್ಳಿಯ ಸಿಂಹಾಸನಾಧೀಶ ಕುಮಾರ ಚನ್ನಬಸವೆಂಬ ಪ್ರಭಾವಿ ವ್ಯಕ್ತಿಯಲ್ಲಿ ದೂರಿಡುವರು. ಅವನು ಈ ನ್ಯಾಯ ತೀರ್ಮಾನವನ್ನು ಮಾಡಬೇಕೆಂದು ಮೂಡಬಿದಿರೆಯ ಚೌಟವನೆ ರಾಣಿ ಅಬ್ಬಕ್ಕದೇವಿ ೨ (೧೫೪೪-೧೫೮೨)ಯ ಸನ್ನಿಧಿಗೆ ಅರಿಕೆ ಮಾಡುವನು. ಅಬ್ಬಕ್ಕ ದೇವಿಯು ಉಭಯ ಪಕ್ಷದವರನ್ನೂ ಮೂಡಬಿದಿರಿಗೆ ಕರೆಸಿ, ತುಳುನಾಡಿನ ಬೇರೆ ಅರಸರನ್ನೂ ಬರಿಸಿ, ಬಿದಿರೆಯ ಹಲರು, ಸೆಟ್ಟಿಕಾರರ ಸಮಕ್ಷಮದಲ್ಲಿ ಈ ಸಮಸ್ಯಯನ್ನು ಬಗೆಹರಿಸಿ, ಕ್ಷೇತ್ರದ ಪಾವಿತ್ರ್ಯವನ್ನು ರಕ್ಷಿಸುವಳು.
ವಿಜಯನಗರದ ಬುಕ್ಕರಾಯನ ಕಾಲದ (ಕ್ರಿ.ಶ ೧೩೬೮) ಒಂದು ಶಾಸನವು (ಶ್ರವಣ ಬೆಳಗೊಳ) ಜೈನರಿಗೂ, ಶ್ರೀ ವೈಷ್ಣವರಿಗೂ ಬಂದ ಮನಸ್ತಾಪವನ್ನು ಒಪ್ಪಂದ ಮೂಲಕ ಬಗೆಹರಿಸಿದ ವಿಷಯವನ್ನು ತಿಳಿಸುತ್ತದೆ. ಅದೇ ಆದರ್ಶ ಅಬ್ಬಕ್ಕ ದೇವಿ ಇಲ್ಲಿ ತೋರಿಸುತ್ತಾಳೆ.
ಪುರಾಣ ಯುಗದ ಜಾಬಾಲಿಯಾಶ್ರಮದ ನೆನಪನ್ನು ಬರಿಸುವ ’ನವಗ್ರಹಮಹಾಯಾಗ’ದ ಮಹೋತ್ಸವ ಕಾಲದಲ್ಲಿ ಶ್ರೀ ಕ್ಷೇತ್ರದ ಮಹಿಮೆಯನ್ನು ಸಾರುವ ಸಂಗತಿಗಳನ್ನು ಜ್ಞಾಪಿಸುವುದು ಸೂಕ್ತವೆಂದು ಇದನ್ನು ಬರೆಯಲಾಗಿದೆ.
ಕೆಲವು ವರ್ಷಗಳ ಹಿಂದೆ ಶ್ರೀ ನೆಲ್ಲಿತೀರ್ಥ ಸೋಮನಾಥೇಶ್ವರ ದೇವಸ್ಥಾನ ಹಾಗೂ ತೀರ್ಥದ ಅದ್ಭುತ ಗುಹೆಯು ಇತಿಹಾಸದ ಪುಟಗಳಿಗೆ ಮಾತ್ರ ಸೀಮಿತವಾಗುವ ಸಂದರ್ಭ ಎದುರಾದಾಗ ಊರಿನ ಪ್ರಜ್ಞಾವಂತ ವ್ಯಕ್ತಿಗಳು ಎಚ್ಚೆತ್ತು ಈ ಪ್ರಕೃತಿಯ ರಮ್ಯ ತಾಣವನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಲು ಪ್ರಯತ್ನಿಸಿ ಸಫಲರಾದುದು ಈಗ ಇತಿಹಾಸ. ಸುಮಾರು ೫೦ ವರ್ಷಗಳಿಂದ ನಡೆದು ಬಂದ ಹೋರಾಟ, ಎದುರಿಸಿದ ಎಡರು ತೊಡರು ಹಲವಾರು. ಆರ್ಥಿಕವಾಗಿ ತೀರಾ ಹಿಂದುಳಿದ ಈ ಪ್ರದೇಶ, ಅಲ್ಲದೆ ಅನ್ಯಮತೀಯರ ಮಧ್ಯೆ ಮತೀಯ ಸಾಮರಸ್ಯವನ್ನು ಉಳಿಸಿಕೊಳ್ಳುತ್ತಾ ಅವರೆಲ್ಲರ ಸಹಕಾರವನ್ನು ಪಡೆದು ಕಾರ್ಯಸಾಧಿಸಬೇಕಾಗಿದೆ. ಈ ಅದ್ಭುತ ಪ್ರಕೃತಿ ತಾಣವನ್ನು ಹೊರ ಜಗತ್ತಿಗೆ ಪರಿಚಯಿಸುವ ಕೆಲಸ ನಮ್ಮ ನಿಮ್ಮೆಲ್ಲರದ್ದಾಗಿದೆ. ಈ ಪ್ರಕೃತಿಯ ಕೂಸು, ಪ್ರಸಕ್ತ ಕಾಲದಲ್ಲಿ ಮಾನಸಿಕ ನೆಮ್ಮದಿಯನ್ನು ಕೊಡುವ ಅಕ್ಷಯ ಪಾತ್ರೆ ಎಂಬುದರಲ್ಲಿ ಎರಡು ಮಾತಿಲ್ಲ.
ಗೀತೆಯಲ್ಲಿ ಶ್ರ್‍ಈಕೃಷ್ಣನು ಹೇಳಿದ ಮಾತು ’ನನ್ನನ್ನು ಪೂಜಿಸಲು ನಾನೇ ಸೃಷ್ಟಿಸಿದ ವಸ್ತುಗಳಿವೆ. ಪತ್ರ, ಪುಷ್ಪ, ಫಲ, ನೀರು, ಏನನ್ನು ಭಕ್ತಿಯಿಂದ ಸಮರ್ಪಿಸಿದರೂ ನಾನು ಸ್ವೀಕರಿಸುವೆ’. ಆ ಮಾತನ್ನು ಈ ಯುಗದಲ್ಲೂ ನಿಜಗೊಳಿಸಲಿಕ್ಕೇನೆ ಎಂಬಂತೆ ನೆಲ್ಲಿತೀರ್ಥದ ಗುಹಾಲಯ ಬೆಳೆದು ನಿಂತಿದೆ. ಪ್ರಕೃತಿ ಮುಖೇನ ಭಗವಂತನ ಆರಾಧನೆಗೆ ನೆಲ್ಲಿತೀರ್ಥ ಗುಹೆಯಂತಹ ಇನ್ನೊಂದು ತಾಣವಿಲ್ಲ. ಸಾಧಕನ ಆಧ್ಯಾತ್ಮಿಕ ಉನ್ನತಿಗೆ ನೆಲ್ಲಿತೀರ್ಥ ಗುಹಾಲಯ ಭಗವಂತ ನಿರ್ಮಿಸಿದ ಪ್ರಾಕೃತಿಕ ಗುರುಕುಲ.
ನಮ್ಮ ಆಧ್ಯಾತ್ಮಕ್ಕೂ ಸಂಖ್ಯೆ ಹದಿನೆಂಟಕ್ಕೂ ಆಳವಾದ ನಂಟಿದೆ, ಸುಲಭವಾಗಿ ಬಿಚ್ಚಲಾಗದ ಗಂಟಿದೆ. ಹದಿನೆಂಟು ಶಾಸ್ತ್ರ, ಹದಿನೆಂಟು ಪುರಾಣ, ಹದಿನೆಂಟು ದಿವಸಗಳ ಭಾರತದ ಯುದ್ಧ, ಹದಿನೆಂಟು ಅಧ್ಯಾಯಗಳ ಗೀತೆ. ಹೀಗೆಯೇ ಮುಂದುವರಿಯುತ್ತದೆ ಹದಿನೆಂಟರ ಲೆಕ್ಕಾಚಾರ. ಏನಿದು ಹದಿನೆಂಟು? ಈ ಹದಿನೆಂಟೇ ನಮ್ಮ ಧರ್ಮದ ಒಳತಿರುಳು. ಇದುವೇ ವೇದ ಉಪನಿಷತ್ತು ಶಾಸ್ತ್ರ ಪುರಾಣಗಳೆಲ್ಲದರ ಜೀವಸತ್ತ್ವ. ಈ ಹದಿನೆಂಟನ್ನು ತಲುಪಲು ಪ್ರಪಂಚದ ನಾನಾ ಧರ್ಮಗಳು ಮಂತ್ರ ದೃಷ್ಠಾರರೂ ಶ್ರಮಿಸಿದ್ದು ಪರಮ ಸತ್ಯ.
ಈ ಪ್ರಯತ್ನ ಇಂದಿನ ವಿಜ್ಞಾನ ಯುಗದಲ್ಲೂ ಮುಂದುವರಿಯುತ್ತದೆ. ಈ ಹದಿನೆಂಟನೆ ಮೆಟ್ಟಲೇ ಮೋಕ್ಷ. ನಮ್ಮ ವೈದಿಕ ಧರ್ಮದ ಕೊನೆಯ ಮೆಟ್ಟಲು. ಈ ಮೆಟ್ಟಲನ್ನು ಮುಟ್ಟಬೇಕಾದರೆ ಮನುಷ್ಯನು ಮೊದಲಿನ ಹದಿನೇಳು ಮೆಟ್ಟಲುಗಳನ್ನು ಜನ್ಮದಾರಾಭ್ಯ ಏರಬೇಕಾಗಿದೆ. ಅದು ಆಧ್ಯಾತ್ಮಿಕ ಸಾಧನೆಯಿಂದ ಮಾತ್ರ ಸಾಧ್ಯ.
ಅದನ್ನೇ ವೇದ ಉಪನಿಷತ್ತುಗಳು ಸಾರುತ್ತಿರುವುದು. ನೆಲ್ಲಿತೀರ್ಥದ ಪ್ರಕೃತಿ ನಿರ್ಮಿತ ಗುಹೆಯೊಳಗಿನ ಶಿವಲಿಂಗದ ದರ್ಶನವಾಗಬೇಕಾದರೆ ನಾವು ಮೊದಲಿನ ೧೭ ಮೆಟ್ಟಲುಗಳನ್ನು ಹೇಗೆ ಏರಬೇಕು ಎಂಬುದನ್ನು ಅರ್ಥೈಸಿಕೊಂಡಾಗ ಮಾತ್ರ ಮೇಲೆ ಹೇಳಿದ ಸಿದ್ಧಾಂತದ ಒಳಗುಟ್ಟು ತಿಳಿಯುತ್ತದೆ. ದೇವರ ಸಾನ್ನಿಧ್ಯವನ್ನು ತಲುಪಬೇಕಾದರೆ ಗರ್ಭಸ್ಥ ಶಿಶುವಿನಿಂದ ವೃದ್ಧ್ಯಾಪ್ಯದವರೆಗೆ ಮಾಡಬೇಕಾದ ಸಾಧನೆ ಹಾಗೂ ಭಕ್ತಿಯೊಂದಿಗೆ ದೈಹಿಕ ಶ್ರಮಕ್ಕೂ, ಕರ್ಮಕ್ಕೂ ಅಷ್ಟೆ ಪ್ರಾಮುಖ್ಯತೆ ಇವೆ ಎಂದು ಅರಿವಾಗುತ್ತದೆ.
ಗುಹೆಗೆ ಇಳಿಯುವಾಗ ತಾಯಿಯ ಹೊಟ್ಟೆಯಲ್ಲಿನ ಗರ್ಭಾವಸ್ಥೆಯ ಶಿಶುವಿನ ರೀತಿಯಲ್ಲಿ ಕುಳಿತು ಇಳಿಯಬೇಕು. ವಸುಂಧರೆಯ ಗರ್ಭವನ್ನು ಪ್ರವೇಶಿಸಿದಂತೆ ನಾವು ಮುಂದಕ್ಕೆ ಶಿಶುವಿನ ಜನನದಾರಭ್ಯ ವಿವಿಧ ಬೆಳವಣಿಗೆಯ ಹಂತದ ರೀತಿಯಲ್ಲಿ ಅಂದರೆ ಹೊಟ್ಟೆ ಊರಿ ಎಳೆದು ಮುಂದೆ ಹೋಗುವುದರಿಂದ ಕುಕ್ಕುರುಗಾಲು, ಅಂಬೆಗಾಲು ಇಡುವವರೆಗೆ ನಾನಾ ರೀತಿಯ ಅವಸ್ಥೆಗಳಲ್ಲಿ ಮುಂದುವರಿಯಬೇಕಾಗುತ್ತದೆ.
ಮನುಷ್ಯನ ಆಯುಷ್ಯ ಪ್ರಮಾಣ ೧೨೦ ವರ್ಷ ಎಂದಾದರೆ ಸಾಮಾನ್ಯವಾಗಿ ೨೦ರಿಂದ ೫೦ರ ೩೦ ವರುಷಗಳನ್ನು ಜೀವನದ ಸಾಧನೆಯ ಕಾಲವೆಂದು ಅರ್ಥೈಸಬಹುದು. ಈ ಪ್ರಕಾರ ನಮಗೆ ಸುಮಾರು ೨೫ ವರುಷಗಳಾದಾಗ ಭವಿಷ್ಯದ ಬದುಕನ್ನು ಬೃಹದಾಕಾರವಾಗಿ ನೋಡುವ ಹಂತಕ್ಕೆ ತಲುಪಿರುತ್ತೇವೆ. ಅಂತೆಯೇ ಗುಹೆಯ ಮಧ್ಯಭಾಗಕ್ಕೆ ಬಂದಾಗ ಅದು ನಮಗೆ ಬೃಹದಾಕಾರವಾಗಿ ಕಾಣಿಸ ತೊಡಗುತ್ತದೆ. ಅದರ ಒಳಗೆ ಒಂದು ಚಿಕ್ಕ ಗುಡ್ಡವಿದ್ದು ನಂತರ ಅದನ್ನು ಏರಬೇಕಾಗಿದೆ. ಅದನ್ನು ನಮ್ಮ ಜೀವನದ ಸಾಧನೆಯ ಕಾಲಕ್ಕೆ ಹೋಲಿಸಬಹುದು. ಅದರ ತುದಿ ಮುಟ್ಟಿದಾಗ ೬೦ರ ಅನುಭವ. ಅದು ಷಷ್ಠಪೂರ್ತಿ. ನಮ್ಮ ವ್ಯವಹಾರಗಳನ್ನು ಮಕ್ಕಳಿಗೆ ಬಿಟ್ಟು, ಅಂದರೆ ಈ ಮನೆಯ ವ್ಯಾಮೋಹವನ್ನು ತೊರೆದು ಆ ಮನೆಯ ಕಡೆಗೆ ಗಮನ ಕೊಡುವ ಕಾಲ. ಪ್ರತೀ ಮನುಷ್ಯನಿಗೆ ಎರಡು ಮನೆಗಳಿವೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಮನುಷ್ಯ ಮೋಹಕ್ಕೊಳಪಟ್ಟು ಒಂದನೇ ಮನೆಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತ ಮಡದಿ, ಮಕ್ಕಳು ಹೀಗೆ ಎಲ್ಲಾ ವಿಷಯ ಸುಖಗಳಲ್ಲಿ ಮಗ್ನನಾಗಿಬಿಡುತ್ತಾನೆ. ಆದರೆ ಆತನಿಗೆ ಇನ್ನೊಂದು ಮನೆಗೆ ಹೋಗಲಿಕ್ಕಿದೆ. ಆ ಮನೆಗೆ ಅವನ ಹಿರಿಯರೆಲ್ಲಾ ಹೋಗಿರುತ್ತಾರೆ. ತನಗೂ ಅಲ್ಲಿ ಬೇಗನೆ ಹೋಗಲಿಕ್ಕಿದೆ .ಅದಕ್ಕಾಗಿ ಆ ಮನೆಯ ವ್ಯವಸ್ಥೆಗಾಗಿ ಏನಾದರೂ ಸಂಗ್ರಹಿಸು ಎಂದು ತಾತ್ಪರ್ಯ. ಅದಕ್ಕಾಗಿ ಆಧ್ಯಾತ್ಮ ಚಿಂತನೆ, ಸತ್ಕರ್ಮ ಮಾಡುವುದು, ತೀರ್ಥಕ್ಷೇತ್ರಗಳನ್ನು ಸಂದರ್ಶಿಸುವುದು. ನಾವು ಏರಿದ ಗುಡ್ಡವನ್ನು ದಕ್ಷಿಣಾ ಮುಖವಾಗಿ ಇಳಿಯುತ್ತೇವೆ. ಇಲ್ಲಿ ದಕ್ಷಿಣಾಮುಖ ಎಂಬುದು ಬಹಳ ಪ್ರಾಮುಖ್ಯವಾದ ವಿಷಯ. ಕೆಳಗಿಳಿದಾಗ ನಮಗೆ ಪ್ರಕೃತಿ ನಿರ್ಮಿತ ಸುಂದರ ಸರೋವರ ಎದುರಾಗುತ್ತದೆ. ಅದುವೇ ಸಂಸಾರ ಸರದಿ. ಅದನ್ನು ದಾಟಿದಾಗ ಪರಾತ್ಪರ ಸ್ವರೂಪಿ ಜಾಬಾಲೇಶ್ವರ ಶಿವಲಿಂಗದ ದರ್ಶನ. ಅದುವೇ ಮೋಕ್ಷ.
ಶ್ರೀ ಗುಹೆಯ ಪ್ರಾರಂಭದಿಂದ ಕೊನೆಯ ತನಕ ನಾವು ಸಾಗುವಾಗ ಸುಮಾರು ೧೮ ಅವಸ್ಥೆಗಳನ್ನು ದಾಟಬೇಕಾಗುತ್ತದೆ. ನಮ್ಮನ್ನೇ ನಾವು ಮರೆತು ಭಗವಂತನ ನಾಮಸ್ಮರಣೆ ಮಾಡುತ್ತಾ, ಧ್ಯಾನದ ಅನುಭವವು ನಮಗೆ ಆಗಿ ಎಲ್ಲವನ್ನು ಮರೆಯುತ್ತೇವೆ.
ಬನ್ನಿ, ಈ ಆನಂದವನ್ನು ಅನುಭವಿಸಿ. ಕೃತಾರ್ಥರಾಗಿ.
No comments:
Post a Comment