Friday, April 9, 2010

ಹಂಪನಕಟ್ಟಾ ಸರ್ಕಾರಿ ಕಾಲೇಜ್

ಮಂಗಳೂರು ಕೇಂದ್ರವಾಗಿರುವ ಈ ಶೈಕ್ಷಣಿಕ ಇತಿಹಾಸದಲ್ಲಿ ಈ ಕೆಂಪು ಕಲ್ಲಿನ ಸರ್ಕಾರಿ ಕಾಲೇಜು ತನ್ನದೇ ಆದ ಇತಿಹಾಸ ಮತ್ತು ಮಹತ್ವವನ್ನು ಪಡೆದಿದೆ. ನಗರದ ಹೃದಯ ಭಾಗದಲ್ಲಿ ಸುಮಾರು 8 ಎಕರೆ ಪ್ರದೇಶದಲ್ಲಿ ಹರಡಿರುವ ಈ ಕಾಲೇಜಿನಲ್ಲಿ ಮೂರು ಪಾರಂಪರಿಕ ಕಟ್ಟಡಗಳಿವೆ. ಆಡಳಿತ ಕಚೇರಿ, ರವಿಂದ್ರ ಕಲಾಭವನ, ಹಾಗೂ ಕಾಮರ್ಸ್ ಬ್ಲಾಕ್ ಗಳನ್ನು ಇದು ಹೊಂದಿದೆ.  ಅದ್ಬುತ ವಾಸ್ತು ಹಾಗೂ ಇಂಡೋ ಸಾರಸೆನಿಕ್ ಶೈಲಿಯಲ್ಲಿ ಕೇವಲ ಕೆಂಪುಮುರ ಕಲ್ಲು  ಹಾಗೂ ಮರಳು ಹಾಗೂ ಮಂಗಳೂರು ಹೆಂಚು ಬಳಸಿ ಕಟ್ಟಲಾದ ಈ  ಕಟ್ಟಡಗಳು ಶತಮಾನವನ್ನು ದಾಟಿವೆ. ಸಾಹಿತಿ ಮತ್ತು ಸ್ವಾತಂತ್ರ ಹೋರಾಟಗಾರರಾದ ಪಂಜೆ ಮಂಗೇಶ್ ರಾವ್, ಮಂಜೇಶ್ವರ ಗೋವಿಂದ ಪೈ, ಬೆನೆಗಲ್ ರಾಂ ರಾವ್, ಡಾ. ಶಿವರಾಂ ಕಾರಂತ್,ಡಾ. ಎ.ಬಿ. ಶೆಟ್ಟಿ, ಕಾರ್ನಾಡ್ ಸದಾಶಿವ ರಾವ್, ಡಾ.ಯು.ಪಿ ಮಲ್ಯ, ಕುದ್ಮುಲ್ ರಂಗ ರಾವ್, ಸೂರ್ಯ ನಾರಾಯಣ್ ಅಡಿಗ, ಎ.ಬಿ. ಶೆಟ್ಟಿ, ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ಎ.ಬಿ. ರಾಮ್ ರಾವ್, ಕೆನರಾ ಬ್ಯಾಂಕಿನ ಸ್ಥಾಪಕ ಅಮ್ಮೆಂಬಳ ಸುಬ್ಬರಾವ್, ಹಿರಿಯ ಸಹಕಾರಿ ಮೊಳಹಳ್ಲಿ ಶಿವರಾವ್ , ಕಮಲಾ ದೇವಿ ಚಟ್ಟೋಪಾಧ್ಯಾಯ, ಅನೇಕ ಮಹಾನ್ ಸಾಧಕರು ಈ ಶಾಲೆಯಲ್ಲಿ ಕಲಿತವರು.! ಈಗಿನ ಡಾ. ವೀರಪ್ಪ ಮೊಯಿಲಿ, ಪಿ.ಎಂ. ಸಾಯಿದ್, ಡಿ.ಕೆ. ಚೌಟ, ಸಂತೋಷ್ ಕುಮಾರ್ ಗುಲ್ವಾಡಿ, ಎಂ.ವಿ. ಕಾಮತ್, ಜಸ್ಟಿಸ್ ಜಗನ್ನಾಥ ಶೆಟ್ಟಿ, ಬಿ.ರಮನಾಥ ರೈ, ಹೀಗೇ ಅನೇಕ ಮಹನೀಯರು ಇಲ್ಲಿನ ಹಳೇ ವಿದ್ಯಾರ್ಥಿಗಳು..
ರವೀಂದ್ರ ಕಲಾಭವನ
ಸೌತ್ ಕೆನರಾ ಜಿಲ್ಲೆಯಲ್ಲಿ ಕ್ರಿ.ಶ. 1800 ರ ಹೊತ್ತಿಗೆ ಬ್ರಿಟೀಷ್ ಆಡಳಿತ ಅಸ್ತಿತ್ವಕ್ಕೆ ಬಂದರೂ, ಶಿಕ್ಷಣದ ಬಗ್ಗೆ ಅವರು ಹೆಚ್ಚು ಆಸಕ್ತಿ ತೋರಿಸಲಿಲ್ಲ.ಆದರೆ ಕೇವಲ ಮತ ಪ್ರಚಾರಕ್ಕೆ ಬಂದ ಜರ್ಮನ್ನಿನ ಬಾಸೆಲ್ ಮಿಷನ್ ಸಂಸ್ಥೆಯವರು,ಧರ್ಮ ಪ್ರಚಾರದ ಕಾರ್ಯದ ಮಧ್ಯೆಯೂ ಇಲ್ಲಿ ಅನೇಕ ವಿದ್ಯಾ ಕೇಂದ್ರಗಳನ್ನು ಆರಂಭಿಸಿದ್ದರ ಫಲವಾಗಿ ಈ ಭಾಗ ಇಂದು ಅಭಿವೃದ್ದಿ ಹೊಂದಲು ಸಾಧ್ಯವಾಯಿತು ಎಂದು ಹೇಳಬಹುದು. ಅವರು ಮಂಗಳೂರು,ಕಾಸರಗೋಡು, ಉತ್ತರ ಕನ್ನಡ, ಮತ್ತು ಉಡುಪಿ ಜಿಲ್ಲೆಗಳಲ್ಲಿ ಅನೇಕ ಶಾಲೆಗಳನ್ನು ತೆರೆದು,ವಿದ್ಯಾರ್ಜನೆ ಮಾಡಿದರು.ಮಂಗಳೂರಿನ ಹಂಪನಕಟ್ಟಾ ಪ್ರದೇಶದಲ್ಲಿ ಪ್ರೊವಿನ್ಶಿಯಲ್ ಸ್ಕೂಲ್ ಎಂಬ ಹೆಸರಿನಲ್ಲಿ 1824 ರಲ್ಲಿ ಆರಂಭಿಸಿದ ಈ ಸಂಸ್ಥೆ 1 ರಿಂದ 10 ನೇ ತರಗತಿಗಳ ವರೆಗೆ ಶಿಕ್ಷಣ ನೀಡುತಿತ್ತು. ನಂತರದ ದಿನಗಳಲ್ಲಿ ವಿವಿಧ ಹಂತಗಳಲ್ಲಿ ವಿಸ್ತಾರಗೊಂಡು ಇಂದು ಹೆಮ್ಮರವಾಗಿ ಬೆಳೆದಿದೆ. . ಆಗಿನ ಕೆಲ ಸ್ಥಳಿಯ ಶ್ರೀಮಂತ ಮಹನೀಯರು ಇಲ್ಲಿನ ಯುವಕರಿಗೂ ಗುಣಮಟ್ಟದ ಉನ್ನತ ಶಿಕ್ಷಣ ದೊರೆಯುವಂತಾಗ ಬೇಕೆಂಬ ಉದ್ದೇಶದಿಂದ 75 ಸಾವಿರ ರೂಪಾಯಿಗಳನ್ನು ಒಟ್ಟುಗೂಡಿಸಿ ಆಡಳಿತ ನಡೆಸುತ್ತಿದ್ದ ಮದ್ರಾಸ್ ಸರ್ಕಾರಕ್ಕೆ ದಾನ ನೀಡಿ ಇಲ್ಲಿ ಸರ್ಕಾರಿ ಕಾಲೇಜು ಸ್ಥಾಪಿಸಬೇಕೆಂದು ಮನವಿ ಮಾಡಿದ್ದರ ಪರಿಣಾಮ ಈ ಕಾಲೇಜು ರೂಪುಗೊಂಡಿತ್ತು. ಆಗ ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿದ ಮಂಗಳೂರಿಗೆ ಸಾರ್ವಜನಿಕ ಶಿಕ್ಷಣಾಧಿಕಾರಿಯಾಗಿದ್ದ ಪಾವೆಲ್ ಎಂಬ ಬ್ರಿಟಿಶದ ಅಧಿಕಾರಿಯ ಶೀಫಾರಸಿನೊಂದಿಗೆ1868 ರಲ್ಲಿ ಸರ್ಕಾರಿ ಶಾಲೆಯಾಗಿ ಆರಂಭ ಗೊಂಡಿತು.  1879 ರಲ್ಲಿ ಫೆಲೋ ಆಫ್ ಆರ್ಟ್ಸ್ ಕೋರ್ಸ್ ಆರಂಭದೊಂದಿಗೆ ಇದು ಅಧಿಕೃತ ಸರ್ಕಾರಿ ಕಾಲೇಜು ಆಗಿ ಅಸ್ಥಿತ್ವಕ್ಕೆ ಬಂತು.ಅಲ್ಲದೇ ಈ ಕಾಲೇಜಿಗೆ ನೇಮಕವಾಗುವ ಪ್ರಾಂಶುಪಾಲರು ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸ ಮಾಡಬೇಕೆಂಬ ಇಚ್ಚೆಯಿಂದ ಅವರ ಅಲ್ಲಿನ ಖರ್ಚುವೆಚ್ಚಗಳನ್ನು ಇವರೇ ನೋಡಿಕೊಂಡಿದ್ದರು..! ಇವರಲ್ಲಿ ಪ್ರಾಂಶುಪಾಲರುಗಳಾದ ಪಿ ವಿ ಎಸ್ ಶಾಸ್ತ್ರೀ, ಚೆಟ್ಟೂರು, ಹಶೀಮ್ ಅವರುಗಳು ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸ ಪಡೆದಿದ್ದರು.ಸರ್ಕಾರಿ ಕಾಲೇಜು ಆರಂಭವಾದ ನಂತರ ಇಲ್ಲಿದ್ದ ಪ್ರಾರ್ಥಮಿಕ ಮತ್ತು ಪ್ರೌಢ ತರಗತಿಗಳನ್ನು ಮುನ್ಸಿಪಲ್ ಸ್ಕೂಲಿಗೆ ವರ್ಗಾಯಿಸಲಾಯಿತು.1902 ರಲ್ಲಿ ಪ್ರಥಮವಾಗಿ ವಿದ್ಯಾರ್ಥಿನಿಯರ ಸೇರ್ಪಡೆಗೆ ಅವಕಾಶ ಕಲ್ಪಿಸಲಾಯಿತು.ಗುರು ರವೀಂದ್ರನಾಥ್ ಟಾಗೋರ್ ಅವರು ಈ ಕಾಲೇಜಿಗೆ 1919 ರಲ್ಲಿ ಭೇಟಿ ನೀಡಿ ಭಾಷಣ ಮಾಡಿದ್ದರು ಮತ್ತು ಕಾಲೇಜಿನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಮಾತ್ರವಲ್ಲ ಈ ಗೀತೆಯನ್ನು ಸ್ವತಹ ರಚಿಸಿ ಶಾಲೆಗೆ ಕಳುಹಿಸಿ ಕೊಟ್ಟಿದ್ದು, ಆದು ಇಂದಿಗೂ ಕಾಲೇಜಿನ ಲೈಬ್ರೆರಿಯಲ್ಲಿ ಕಾಣ ಸಿಗುತ್ತದೆ..ಮಹಾತ್ಮಾ ಗಾಂದಿ ಅವರ ಚಿತಾ ಭಸ್ಮಾವನ್ನು ಸಾರ್ವಜನಿಕರ ದರ್ಶನಕ್ಕೆ ಇಟ್ಟದ್ದು ಇದೇ ರವೀಂದ್ರ ಕಲಾಭವನದಲ್ಲಿ..
!! 1948 ರಲ್ಲಿ ಪ್ರಥಮ ದರ್ಜೆಯ ಕಾಲೇಜು ಆಗಿ ಉನ್ನತಿಕರಣಗೊಂಡ ಈ ಕಾಲೇಜನ್ನು ಇಲ್ಲಿನ ಹಳೇ ವಿದ್ಯಾರ್ಥಿಯೂ, ಕರ್ನಾಟಕದ ಮುಖ್ಯಮಂತ್ರಿಯೂ ಆದ ಡಾ. ಎಂ. ವೀರಪ್ಪ ಮೊಯಿಲಿ ಅವರು 1993 ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಹಸ್ತಾಂತರಿಸಿದ್ದರು.ಅಂದಿನಿಂದ ಇಂದಿನವರೆಗೆ ವಿದ್ಯಾ ಕ್ಷೇತ್ರದಲ್ಲಿ ಅನೇಕ ಸಾಧನೆಗಳನ್ನು ಮಾಡುತ್ತಾ ಅಭಿವೃದ್ದಿ ಪಥದಲ್ಲಿ ಮುಂದೆ ಸಾಗುತ್ತಾ ಬರುತ್ತಿದೆ.ಇದೀಗ ಯು.ಜಿ.ಸಿ ಈ ಕಾಲೇಜಿಗೆ ಪಾರಂಪರಿಕ ಕಾಲೇಜಿನ ಸ್ಥಾನಮಾನ ನೀಡಿದೆ.ಕಾಲೇಜಿನ ಪಾರಂಪರಿಕ ಕಟ್ಟಡ ನಿರ್ವಹಣೆ ಮತ್ತು ದುರಸ್ತಿ ಹಾಗೂ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ವಾರ್ಷಿಕವಾಗಿ 8 ರಿಂದ 10 ಕೋಟಿ ರೂಪಾಯಿಗಳ ಈ ಯುಜಿಸಿ ಅನುದಾನ ಬಳಕೆಯಾಗಲಿದೆ.

No comments:

Post a Comment