" ಬ್ಯಾರಿ " ಎಂಬ ಪದವು ತುಳುವಿನ ಬ್ಯಾರ ಎಂಬ ಶಬ್ದ ದಿಂದ ಉದ್ಭವಗೊಂಡಿದ್ದು ವ್ಯಾಪಾರ ವಹಿವಾಟು ಎಂದು ಅದರ ಅರ್ಥ. ಪ್ರಾಚೀನ ಕಾಲದಿಂದಲೂ ಈ ಜನಾಗದ ಹೆಚ್ಚಿನ ಜನರು ವ್ಯಾಪಾರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಡಿದ್ದರು. ಆದ್ದರಿಂದ ಸ್ಥಳೀಯ ತುಳುವರು ಅವರನ್ನು ಬ್ಯಾರಿಗಳೆಂದು ಕರೆಯುತ್ತಿದ್ದರು. ಕ್ರಿ.ಶ.1891ರ ಜನಗಣತಿಯ ಪ್ರಕಾರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆ ಕಾಲದಲ್ಲಿ 90,345 ಬ್ಯಾರಿ ವ್ಯಾಪಾರಿಗಳಿದ್ದರು. ಮತ್ತು ಇದು ಒಟ್ಟು ವರ್ತಕರ ಪ್ರಮಾಣಕ್ಕೆ ಹೋಲಿಸಿದರೆ ಸುಮಾರು ಶೇಕಡಾ 92ರಷ್ಟಾಗಿತ್ತು. ಆದ್ದರಿಂದಲೇ ಅವರನ್ನು ಬ್ಯಾರಿಗಳೆಂದು ಕರೆಯಲಾಗುತ್ತಿತ್ತು ಮತ್ತು ಇದು ಅನ್ವರ್ಥಕನಾಮವೂ ಆಗಿತ್ತು.
ಬ್ಯಾರಿಗಳು ತುಳುನಾಡು ಎಂದು ಹಿಂದೆ ಕರೆಯಲಾಗುತ್ತಿದ್ದ ಕರ್ನಾಟಕದ ಈಗಿನ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ವಾಸವಾಗಿರುವ ಒಂದು ಮುಸ್ಲಿಂ ಜನಾಂಗ. ಅವರು ತಮ್ಮದೇ ಆದ ವಿಶಿಷ್ಟ ಸಂಪ್ರದಾಯ ಮತ್ತು ಸಾಂಸ್ಕೃತಿಕ ಅನನ್ಯತೆಯನ್ನು ಹೊಂದಿರುವ ಒಂದು ಸಾಮಾಜಿಕ ಪಂಗಡ. ಬ್ಯಾರಿಗಳಿಗೆ ಕೊಂಕಣ ತೀರದ ನವಾಯತರು ಮತ್ತು ಮಲಬಾರಿನ ಮಾಪಿಳ್ಳಗಳಿಗೆ ಸಮನಾದ ಒಂದು ಮಹತ್ವದ ಸಾಂಸ್ಕೃತಿಕ ಸಂಪ್ರದಾಯವಿದೆ. 1891ರ ಕೂಚ್ ಮನ್ ಸಮೀಕ್ಷಾ ವರದಿಯಲ್ಲಿ ನಮೂದಾಗಿರುವಂತೆ ಈ ಜನಾಂಗದ ಪ್ರಮುಖ ಗುರುತು ಎಂದರೆ ಪುರುಷರಿಗೆ ಬ್ಯಾರಿ ಮತ್ತು ಮಹಿಳೆಯರಿಗೆ ಬ್ಯಾರ್ದಿ ಎಂಬ ಒಕ್ಕಣೆಯಿರುವುದು. ಅಲ್ಲದೆ ಈ ಜನಾಗಕ್ಕೂ ತುಳುನಾಡಿನ ಸಂಪ್ರದಾಯಗಳಿಗೂ ನಡುವೆ ಒಂದು ಬಗೆಯ ಸಾಂಸ್ಕೃತಿಕ ಸಾಮರಸ್ಯವಿದೆ. ಬ್ಯಾರಿಗಳು ತುಳು ಸಂಸ್ಕೃತಿಗೆ ತಮ್ಮನ್ನು ತೆರೆದುಕೊಂಡಿರುವುದರ ಜತೆಗೆ ಮಲಬಾರಿನ ಮಾಪಿಳ್ಳಗಳ ವಿಭಿನ್ನ ಸಂಪದ್ರಾಯಗಳನ್ನೂ ಅಳವಡಿಸಿಕೊಂಡಿದ್ದಾರೆ. ಬ್ಯಾರಿಗಳು ಧಾರ್ಮಿಕ ನಂಬಿಕೆಯ ದೃಷ್ಟಿಯಿಂದ ಮುಸ್ಲಿಮರಾಗಿದ್ದು ಇಸ್ಮಾಮಿನ ಶಾಫಿ ಎಂಬ ಕರ್ಮಶಾಸ್ತ್ರ ವಿಭಾಗಕ್ಕೆ ಸೇರಿದವರಾಗಿದ್ದಾರೆ.
ಬ್ಯಾರಿಗಳು ತುಳುನಾಡಿನ ಇತಿಹಾಸವನ್ನು ತೆಗೆದುಕೊಂಡರೆ ಅತ್ಯಂತ ಪ್ರಾಚೀನ ಮುಸ್ಲಿಂ ಜನಾಂಗ ವಾಗಿದ್ದಾರೆ. ಇಡೀ ಭಾರತದಲ್ಲೇ ಅತ್ಯಂತ ಪುರಾತನ ಮುಸ್ಲೀಂ ಸಮುದಾ ಯವಾಗಿರುವ ಬ್ಯಾರಿಗಳಿಗೆ 1,200 ವರ್ಷಕ್ಕೂ ದೀರ್ಘವಾದ ನಿಖರ ಐತಿಹಾಸಿಕ ಹಿನ್ನಲೆಯಿದೆ. ತುಳು ಜನಪದ ಹಾಡಾಗಿರುವ ಪಾಡ್ದನ ಮತ್ತಿತರ ದಾಖಲೆಗಳು ಕೂಡಾ ಈ ಜನಾಂಗಕ್ಕೆ ತುಳುನಾಡು ಮತ್ತು ಅದರ ಸಂಸ್ಕೃತಿಯೊಂದಿಗೆ ಇದ್ದ ಅಂತರ್ಗತ ಸಂಬಂಧಗಳನ್ನು ಎತ್ತಿ ತೋರಿಸುತ್ತದೆ.ಜೈನರೊಂದಿನ ಸಂಪರ್ಕದಿಂದಾಗಿ ಬ್ಯಾರಿಗಳು ಪ್ರವರ್ಧಮಾನಕ್ಕೆ ಬಂದರು. ಹದಿನಾರನೇ ಶತಮಾನದಲ್ಲಿ ಚೌಟರು, ಬಂಗರು ಮತ್ತು ಅಜಿಲಗಳೆಂಬ ಜೈನ ಕುಟುಂಬಗಳು ಬ್ಯಾರಿಗಳ ವ್ಯಾಪಾರ ಮತ್ತು ಸೇವೆಗೆ ಹೆಚ್ಚಿನ ಉತ್ತೇಜನ ಕೊಟ್ಟರು. ಬ್ಯಾರಿಗಳು ಅತ್ಯಂತ ನಂಬಿಗಸ್ಥ ಸೇವಕರೆಂಬ ಗೌರವವನ್ನೂ ಸಂಪಾದಿಸಿದರು. ರಾಣಿ ಅಬ್ಬಕ್ಕ ಜತೆ ಸೇವಕರಾಗಿ ಕಾರ್ಯ ನಿರ್ವಹಿಸಿದ ಬಗ್ಗೆಯೂ ಉಲ್ಲೇಖಗಳು ಕಂಡು ಬರುತ್ತವೆ. ಪೋರ್ಚುಗೀಸರ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ಸೇನಾನಿಗಳಾಗಿಯೂ ಅಬ್ಬಕ್ಕ ಸೈನಿಕರಾಗಿಯೂ ಅವರು ಕಾರ್ಯ ನಿರ್ವಹಿಸಿದವರು.
ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ಆಡಳಿತ ಕಾಲದಲ್ಲಿ ಹಲವು ಬ್ಯಾರಿ ನಾಯಕರು ಪ್ರಮುಖ ಅಧಿಕಾರಿಗಳಾಗಿಯೂ ಸೇವೆ ಸಲ್ಲಿಸಿದ್ದರು. ಬ್ರಿಟಿಷ್ ಸೇನೆಯ ವಿರುದ್ಧ ಸಾಧುರಿ ಬ್ಯಾರಿಗಳು ನಡೆಸಿದ ಮೆರವಣಿಗೆಯು ಒಂದು ಸ್ಮರಣೀಯ ಘಟನೆಯಾಗಿ ದಾಖಲಾಗಿದೆ. ಟಿಪ್ಪು ಸುಲ್ತಾನರ ಪತನದ ನಂತರ ಬ್ರಿಟಿಷರು ಕೂಡಾ ಬ್ಯಾರಿಗಳನ್ನು ಗೌರವದಿಂದ ನಡೆಸಿಕೊಂಡಿರುವುದು ಕಂಡು ಬರುತ್ತದೆ. ಕೆಲವು ಬ್ಯಾರಿ ನಾಯಕರನ್ನು ಬಹದುರ್ ಗಳು ಮತ್ತು ಖಾನ್ ಬಹಾದುರ್ ಗಳೆಂಬ ಬಿರುದಿನಿಂದ ಸನ್ಮಾನಿಸಲಾಗಿತ್ತು. ಬ್ರಿಟಿಷ್ ಆಡಳಿತದ ಪತನದ ನಂತರ ಮತ್ತು ಊಳಿಗಮಾನ್ಯ ನಾಯಕರು ಕಾಲಾವಶೇಷಗೊಂಡ ಬಳಿಕ ಬ್ಯಾರಿಗಳ ಶಕ್ತಿ ಕುಂದಿತು. ನಾಯಕತ್ವ ಮತ್ತು ಕೀರ್ತಿ ಹೊರಟು ಹೋದ ಮೇಲೆ ಬ್ಯಾರಿಗಳು ತಮ್ಮ ಸಾಮಾಜಿಕ ಸ್ಥಾನಮಾನವನ್ನು ಕಳೆದುಕೊಂಡರು.
ಬ್ಯಾರಿ ಗಳು ಹಿಂದಿನ ಅವಿ ಭಜಿತ ದಕ್ಷಿಣ ಕನ್ನಡದ ಭಾಗ ಗಳಾದ ಮಂಗ ಳೂರು, ಉಡುಪಿ ಮತ್ತು ಕಾಸರ ಗೋಡಿಗೆ ಆಗಮಿ ಸಿದ್ದ ಪ್ರಾಚೀನ ಅರಬ್ ವರ್ತಕರು ಮತ್ತು ಸ್ಥಳೀಯ ಮೂಲ ನಿವಾಸಿ ಗಳ ಸಂತಾನ ವಾಗಿದ್ದಾರೆ. ಒಂದು ವರ್ತಕ ಸಮು ದಾಯ ವಾಗಿದ್ದ ಕಾರಣ ಇವರು ನದಿ ತಟಗಳಲ್ಲಿ ವಾಸ ಹೂಡಿದರು. ಮಂಗಳೂರಿನ ಕಡೆ ಅರಬಿ ಸಮುದ್ರದ ಹಿನ್ನೀರಿನಿಂದ ಆವೃತ್ತವಾದ ಉಳ್ಳಾಲದಿಂದ ಮೂಲ್ಕಿಯವರೆಗಿನ ದೋಣಿಯಲ್ಲಿ ಸಂಚರಿಸಲು ಸಾಧ್ಯವಿರುವ 15 ಕಿ.ಮೀ. ವ್ಯಾಪ್ತಿಯಲ್ಲಿ ಈ ಜನಾಂಗ ವಾಸ ಹೂಡಿತು. ಮತ್ತೊಂದು ಕಡೆ ನೆರೆಯ ಕಾಸರಗೋಡಿನಿಂದ ಮಂಜೇಶ್ವರದವರೆಗಿನ ತೀರ ಪ್ರದೇಶದಲ್ಲಿ ಕೂಡಾ ಇವರು ಠಿಕಾಣಿ ಹೂಡಿದರು. ಇವು ಬ್ಯಾರಿಗಳ ಪ್ರಾಚೀನ ವಸತಿ ಪ್ರದೇಶಗಳಾಗಿದ್ದವು ಮತ್ತು ಇಲ್ಲಿ ಕ್ರಿ.ಶ. ಎಳನೇ ಶತಮಾನದಷ್ಟು ಹಿಂದೆಯೇ ಇಸ್ಲಾಮಿನ ಪ್ರವೇಶವಾಗಿತ್ತು.
ಕಾಲ ಕ್ರಮೇಣ ಬ್ಯಾರಿಗಳು ಕೊಡಗು, ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಿಗೂ ಹರಡಿದರು. ಕ್ರಿ.ಶ.1950 ರ ನಂತರ ಇವರು ಕೇವಲ ಭಾರತದಲ್ಲಷ್ಟೇ ಅಲ್ಲ, ಗಲ್ಫ್, ಅಮೇರಿಕಾ, ಆಸ್ಟೇಲಿಯಾ ಮತ್ತಿತರ ರಾಷ್ಟ್ರಗಳಿಗೂ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಂಡರು. ಇಂದು ಇವರು ಭಾರತದ ಪ್ರಮುಖ ನಗರಗಳಾದ ಬೆಂಗಳೂರು, ಮುಂಬೈ, ಗೋವಾ ಮತ್ತು ಮೈಸೂರಿನಲ್ಲೂ ಕಂಡು ಬರುತ್ತಾರೆ. ಇಂದು ಬ್ಯಾರಿಗಳ ಜನಸಂಖ್ಯೆ 15 ಲಕ್ಷವನ್ನೂ ದಾಟಿದ್ದು ವಿಶ್ವದಾದ್ಯಂತ ಇವರು ಹಬ್ಬಿಕೊಂಡಿದ್ದಾರೆ.
ಬ್ಯಾರಿ ಸಮುದಾಯದ ಉಗಮವು ಸಮರ್ಪಕವಾಗಿ ದಾಖಲುಗೊಂಡಿಲ್ಲ. ಡಾ. ಸುಶೀಲಾ ಉಪಾಧ್ಯಾಯ ಮತ್ತು ಪ್ರೊ. ಬಿ.ಎಂ. ಇಚ್ಲಂಗೋಡುರಂಥವರು ಬಾರಿಗಳ ಉಗಮವನ್ನು ಪತ್ತೆಹಚ್ಚಲು ಬಹಳ ಪ್ರಯತ್ನಗಳನ್ನು ನಡೆಸಿದ್ದಾರೆ. ತುಳುನಾಡಿನೊಂದಿಗೆ ಅರಬ್ ವರ್ತಕರ ಸಂಪರ್ಕವು ಒಂದು ಸಂತತಿ ಮತ್ತು ಸಮುದಾಯಕ್ಕೆ ಜನ್ಮ ಕೊಟ್ಟಿತೆಂಬುದು ವ್ಯಕ್ಯ್ತ. ಇಸ್ಲಾಮಿನ ಪ್ರವೇಶದೊಂದಿಗೆ ತಮ್ಮ ವ್ಯಾಪಾರ ವಹಿವಾಟುಗಳ ಜತೆಗೆ ಈ ಅರಬರು ಧರ್ಮ ಪ್ರಚಾರ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡರು. ಅಂದಿನ ಕಾಲದಲ್ಲಿ ತುಳುನಾಡಿನಲ್ಲಿ ಊಳಿಗಮಾನ್ಯ ವ್ಯವಸ್ಥೆ ಇತ್ತು ಮತ್ತು ಜಾತಿ ಪದ್ದತಿಯು ಅಳವಾಗಿ ಬೇರೂರಿತ್ತು. ಅರಬರು ತಮ್ಮ ಔದಾರ್ಯ, ಪ್ರಾಮಾಣಿಕತೆ ಮತ್ತು ಶಿಸ್ತುಬದ್ಧ ಜೀವನಶೈಲಿಯ ಮೂಲಕ ಸ್ಥಳೀಯರನ್ನು ತಮ್ಮತ್ತ ಆಕರ್ಷಿಸಿದರು. ಇದೇ ಬಗೆಯ ಅರಬ್ ಸಂಪರ್ಕಗಳಿಂದಾಗಿ ಪಶ್ಚಿಮ ಕರಾವಳಿಯ ವಿವಿಧ ಭಾಗಗಳಲ್ಲಿ ಹಲವು ಜನಸಮುದಾಯಗಳು ಉಗಮಗೊಂಡವು. ಮಲಬಾರ್, ಕೊಂಕಣ್, ಕೋರಮಂಡಲ್ ತೀರಗಳಲ್ಲಿ ಜನ್ಮತಳೆದ ಈ ಜನಾಂಗಗಳು ಕ್ರಮೇಣ ಮಾಪಿಳ್ಳ, ನವಾಯತ್ ಮತ್ತು ಲಬ್ಬಾಯಿಗಳೆಂಬ ಹೆಸರಿನಿಂದ ಗುರುತಿಸಲ್ಪಟ್ಟರು.
ಅರಬ್ ಸಂಪರ್ಕದಿಂದಾಗಿ ದಕ್ಷೀಣ ಕರಾವಲಿಯಲ್ಲಿ ಹೊಸ ಜನಾಂಗಗಳು ಜನ್ಮ ತಳೆದವು ಎಂಬ ವಾದವನ್ನು ತಾರಾಚಂದ್, ಥೋಮಸ್ ಆರ್ನಾಲ್ಡ್, ಸಾಲೆತೂರೆ ಮತ್ತಿತರ ಹಲವು ಇತಿಹಾಸಜÕರು ಬೆಂಬಲಿಸುತ್ತಾರೆ. ಹೀಗೆ ಇಸ್ಲಾಮಿಗೆ ಮತಾಂತರಗೊಂಡವರಲ್ಲಿ ಹೆಚ್ಚಿನವರು ಕೆಳ ವರ್ಗಕ್ಕೆ ಸೇರಿದವರೂ ಸ್ಥಳೀಯ ಮತವನ್ನು ಪಾಲಿಸುತ್ತಿದ್ದವರೂ ಆಗಿದ್ದರು. ಆದರೆ ಇವರು ಇತರ ಸ್ಥಳೀಯ ಜನತೆಯೊಂದಿಗೆ ತಮ್ಮ ಸ್ನೇಹ ಸಂಬಂಧವನ್ನು ಮುಂದುವರೆಸುತ್ತಲೇ ಹೋದರು. ೧೮೮೬ರ ಪಾಡ್ದನಗಳು ಅರ್ಥಾತ್ ನಡವಳಿಕೆ ಗುಚ್ಛದಲ್ಲಿ ಎರಡು ಗುಂಪಿನ ಬ್ಯಾರಿಗಳ ಬಗ್ಗೆ ಪ್ರಸ್ತಾಪವಿದೆ - ಜಾತಿ ನೀತಿ ಬ್ಯಾರಿಗಳು ಮತ್ತು ಜಾತಿ ಶೆಟ್ಟಿ ಬ್ಯಾರಿಗಳು. ಜಾತಿ ನೀತಿ ಬ್ಯಾರಿಗಳಿಗೆ ಸ್ಥಳೀಯರ ದೃಷ್ಟಿಯಲ್ಲಿ ಹೆಚ್ಚಿನ ಮನ್ನಣೆ ಗೌರವವಿತ್ತು ಮತ್ತು ಅವರು ಇಸ್ಲಾಮೀ ನಂಬಿಕೆ ಮತ್ತು ಶಿಸ್ತನ್ನು ಪಾಲಿಸುತ್ತಿದ್ದರು. ಇನ್ನೊಂದು ಗುಂಪು ಕೇವಲ ಇಸ್ಲಾಮಿನ ಪವಿತ್ರ ವಚನ (ಕಲಿಮಾ)ದ ಪ್ರತಿಜೆÕಯನ್ನು ಸ್ವೀಕರಿಸಿತ್ತಾದರೂ ಇಸ್ಲಾಮೀ ಆಚರಣೆಗಳನ್ನು ಪಾಲಿಸುತ್ತಿರಲ್ಲಿಲ್ಲ. ಇವರ ಹೆಸರುಗಳಿಗೂ ಸ್ಥಳೀಯ ಹೆಸರುಗಳಿಗೂ ನಿಕಟ ಸಾಮ್ಯತೆ ಇತ್ತು. ಉದಾ: ಆದು, ಸೇಕು, ಬಪ್ಪ, ಸಾದು, ಸೈದು ಇತ್ಯಾದಿ.
ಮಲಬಾರ್ ಮತ್ತು ತುಳುನಾಡಿನಲ್ಲಿ ಇಸ್ಲಾಮ್ ಧರ್ಮ ಪ್ರಚಾರಕ್ಕೆ ದೀನಾರ್ ಮಿಷನರಿಯೇ ಕಾರಣ. ಹಿಂದೆ ಸಿಂಹಳೀಯ ತೀರ್ಥಯಾತ್ರಿಕ ಶೇಕ್ ಸಿಕಾವುದ್ಧೀನ್ ಎಂಬವರು ರಾಜ ಚೆರುಮಾನ್ ನ ರಾಜಧಾನಿ ಕೊಡುಂಗಲ್ಲೂರ್ ಗೆ ಭೇಟಿ ನೀಡಿದ್ದರೆಂದೂ ಮಕ್ಕಾದಲ್ಲಿ ಚಂದ್ರ ವಿಭಜನೆಗೊಂಡ ಕತೆಯನ್ನು ವಿವರಿಸಿದ್ದರೆಂದೂ ಹೇಳಲಾಗುತ್ತದೆ. ಕೊಡುಂಗಲ್ಲೂರಿನ ರಾಜನಿಗೆ ಅದಾಗಲೇ ಈ ಕನಸು ಬಿದ್ದಿತ್ತು ಮತ್ತು ಇದೊಂದು ಪವಾಡವೆಂಬುದು ಮನವರಿಕೆಯಾದ ಬಳಿಕ ಅವರು ಮಕ್ಕಾಗೆ ಹೊರಟು ಪ್ರವಾದಿಯನ್ನು ನೋಡುವ ಅಭಿಲಾಷೆ ವ್ಯಕ್ತಪಡಿಸಿದರು. ಆ ವ್ಯಕ್ತಿಯ ಹೆಸರು ಅಬ್ದುಲ್ ರಹ್ಮಾನ್ ಸಾಮಿರಿ ಎಂದಾಗಿತ್ತು. ರೆಹಾಬಿಯಾ ಅವರ ಪತ್ನಿಯಾಗಿದ್ದರು. ಅವರು ಮಕ್ಕಾ ಸಂದರ್ಶನದಿಂದ ಹಿಂದಿರುಗುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟರು. ಮಾತ್ರವಲ್ಲ, ಇಸ್ಲಾಮಿನ ಪ್ರಚಾರದ ಹೊಣೆಗಾರಿಕೆಯನ್ನು ಅವರು ತನ್ನ ಸಂಗಾತಿಗಳಾದ ಮಾಲಿಕ್ ಬಿನ್ ದೀನಾರ್ ಮತ್ತವರ ಅನುಯಾಯಿಗಳಿಗೆ ವಹಿಸಿಕೊಟ್ಟರು. ದೀನಾರ್ ಎಂಬವರ ನಾಯಕತ್ವದಲ್ಲಿ ಈ ಧರ್ಮಪ್ರಚಾರಕರ ತಂಡವು ಮಲಬಾರ್ ಕರಾವಳಿಯನ್ನು ತನ್ನ ಕರ್ಮಭೂಮಿಯನ್ನಾಗಿ ಮಾಡಿಕೊಂಡಿತು. ಕೇರಳೊಳ್ಪಟ್ಟಿ ಎಂಬ ಆರಂಭ ಕಾಲದ ಮಲಯಾಳಂ ಕೃತಿ ಹಾಗೂ ಲೋಗನ್ ಬರೆದ ಮಲಬಾರ್ ಮ್ಯಾನುವಲ್ ನ ಭಾಗ ಒಂದರಲ್ಲ್ಲಿ ಈ ಮಿಷನರಿಗಳು ಸ್ಥಾಪಿಸಿದ ಹತ್ತು ಮಸೀದಿಗಳ ಪ್ರಸ್ತಾಪವಿದೆ. ಈ ಪೈಕಿ ಮೂರು ಮಸೀದಿಗಳು ತುಳುನಾಡಿನಲ್ಲಿ, ಅಂದರೆ ಕಾಸರಗೋಡು, ಮಂಗಳೂರು ಮತ್ತು ಬಾರಕೂರಿನಲ್ಲಿ ಸ್ಥಾಪನೆಗೊಂಡಿದ್ದವು. ಈ ಮೂರು ಕೇಂದ್ರಗಳಿಗೆ ಖಾಝಿಗಳನ್ನೂ ನೇಮಕ ಮಾಡಲಾಗಿತ್ತು. ಮಾಲಿಕ್ ಬಿನ್ ಹಬೀಬ್ ರ ಮಕ್ಕಳಾದ ಇಬ್ರಾಹೀಮ್, ಮೂಸಾ ಮತ್ತು ಮಹಮೂದ್ ಖಾಝಿಯ ಕರ್ತವ್ಯ ನಿರ್ವಹಿಸುತ್ತಿದ್ದರು. ತುಳುನಾಡಿಗೆ ಇಸ್ಲಾಮ್ ಪ್ರವೇಶವಾದ ಕುರಿತ ಈ ವಿಚಾರಣೆಯು ಅತ್ಯಂತ ವಿಶ್ವಾಸಾರ್ಹವಾದುದೆಂದು ಲೋಗನ್ ಹೇಳಿದ್ದಾನೆ. ಈ ಮಸೀದಿ ಮತ್ತು ಮುಸ್ಲಿಮ್ ಕೇಂದ್ರಗಳ ಪೈಕಿ ಬಾರಕೂರು ಸೂಕ್ತ ಬೆಂಬಲ ಇಲ್ಲದ ಕಾರಣ ಕ್ರಮೇಣ ಮರೆಯಾಗುತ್ತಾ ಹೋಯಿತು. ತದನಂತರ ಬಾಬಾ ಫಕ್ರುದ್ದೀನ್, ಸಯ್ಯದ್ ಶರೀಫುಲ್ ಮದನಿ ಮತ್ತಿತರ ಹಲವು ಸೂಫಿ ಸಂತರು ಈ ಪ್ರದೇಶಗಳಲ್ಲಿ ಇಸ್ಲಾಮಿನ ಸಂದೇಶ ಪ್ರಚಾರ ನಡೆಸಿದರು. ಮಲಬಾರ್ ನಲ್ಲಿ ಈ ಜನಾಂಗವು ಮಾಪಿಳ್ಳ ಎಂಬ ಹೆಸರಿನಿಂದ ಪ್ರಸಿದ್ಧವಾಯಿತು ಮತ್ತು ಇವರು ಸ್ಥಳೀಯ ಮಲಯಾಳಂ ಭಾಷೆಯನ್ನು ಸಂವಹನಕ್ಕೆ ಬಳಸಿಕೊಂಡರು.
ಮಾಪಿಳ್ಳಗಳ ಸಂದೇಶ ಪ್ರಚಾರ ಚಟುವಟಿಕೆಗಳ ಪ್ರಭಾವದಿಂದಾಗಿ ತುಳುನಾಡಿನ ಬ್ಯಾರಿಗಳು ಕೂಡಾ ಮಾಪಿಳ್ಳಗಳೆಂದೇ ಗುರುತಿಸ್ಪಟ್ಟರು. ಅವರ ಹೆಸರಿನಲ್ಲಿ ಬ್ಯಾರಿ ಎಂಬ ಒಕ್ಕಣೆ ಇದ್ದರೂ ಎಲ್ಲ ಕಂದಾಯ ದಾಖಲೆಗಳಲ್ಲಿ ಅವರು ಮಾಪಿಳ್ಳ ಜಾತಿ ಎಂದೇ ಇತ್ತೀಚಿನವರೆಗೂ ಕರೆಯಲ್ಪಡುತ್ತಿದ್ದರು. ಇಪ್ಪತ್ತನೇ ಶತಮಾನದ ದ್ವಿತೀಯಾರ್ಧದಲ್ಲಿ ಪ್ರೊ. ಬಿ.ಎಂ. ಇಚ್ಲಂಗೋಡು ಮತ್ತಿತರ ಮೇಧಾವಿಗಳು ಬ್ಯಾರಿಗಳ ಪ್ರತ್ಯೇಕ ಅನನ್ಯತೆಯನ್ನು ಪ್ರಬಲವಾಗಿ ಪ್ರತಿಪಾದಿಸಿದರು
ಬ್ಯಾರಿ ಭಾಷೆಯ ಮತ್ತು ಸಂಸ್ಕೃತಿಯ ಕೆಲವು ವಿಶೇಷಗಳನ್ನು ಇಲ್ಲಿ ಗಮನಿಸಬಹುದಾಗಿದೆ. ಬ್ಯಾರಿಗಳು ತಮ್ಮ ಹೆಸರಿನಲ್ಲಿ ಬ್ಯಾರಿ ಎಂಬ ಒಕ್ಕಣೆಯನ್ನು ಅತ್ಯಂತ ಹೆಮ್ಮೆಯಿಂದ ಸೇರಿಸುತ್ತಿದ್ದರು. ತಮ್ಮ ಸ್ವತಂತ್ರ ಸಾಮಾಜಿಕ ಸ್ಥಾನಮಾನವನ್ನು ಘೋಷಿಸಿ ಕೊಳ್ಳುವುದು ಅಂದಿನ ತುಳುನಾಡಿನ ಸಾಮಾನ್ಯ ಸಂಪ್ರದಾಯವಾಗಿತ್ತು - ಶೆಟ್ಟಿ, ಹೆಗ್ಡೆ, ಆಳ್ವ, ಕಾಮತ್ ಇತ್ಯಾದಿ. ಈ ಭಾಷೆಯು ತುಳಿವಿನ ವ್ಯಾಕರಣವನ್ನು ಹೊಂದಿದ್ದು ಇದು ಮಲಯಾಳಂಗಿಂತ ಭಿನ್ನವಾಗಿದೆ. ಶೇ.50ಕ್ಕೂ ಹೆಚ್ಚು ತುಳು ಪದಗಳು ಈ ಭಾಷೆಯಲ್ಲಿವೆ. ಮಾಪಿಳ್ಳಗಳು ಆಡುವ ಮಲಯಾಳಂನಲ್ಲ್ಲಿ ತುಳು ಪದಗಳು ಕಂಡುಬರುವುದು ಬಹಳ ಅಪರೂಪ.
ಬ್ಯಾರಿ ಭಾಷೆಯಲ್ಲೂ ಮಲಯಾಳಂನ ಪದಗಳಿವೆ. ಆದರೆ ಹೆಚ್ಚಾಗಿ ಬಳಕೆಯಾಗುವ ಮಲಯಾಳಂ ಪದಗಳು ಕೂಡಾ ಈ ಭಾಷೆಯಲ್ಲಿ ಸೇರ್ಪಡೆಯಾಗಿಲ್ಲ. ಸಂಸ್ಕೃತ ಪದಗಳು ಕೂಡಾ ಈ ಭಾಷೆಯಲ್ಲಿ ಕಂಡುಬರುವುದಿಲ್ಲ. ಅರಬಿ ಮತ್ತು ಪರ್ಶಿಯನ್ ಭಾಷೆಯ ಪದಗಳು ಸಾಮಾನ್ಯವಾಗಿ ಬಳಕೆಯಲ್ಲಿವೆ.ಭಾಷೆಯ ಉಚ್ಛಾರ ಮತ್ತು ಧ್ವನಿಯು ಮಲಯಾಳಂಗಿಂತ ತೀರಾ ಭಿನ್ನವಾಗಿವೆ.
ಈ ವಿಶೇಷತೆಗಳಿಂದಾಗಿ ಬ್ಯಾರಿ ಭಾಷೆಯು ಮಲಯಾಳಂಗಿಂತ ಭಿನ್ನ ಎಂಬುದು ಸ್ಪಸ್ಟವಾಗುತ್ತದೆ.
ಬ್ಯಾರಿಗೆ ಲಿಪಿಯಿಲ್ಲ. ಕೆಲವು ದಾಖಲೆಗಳ ಪ್ರಕಾರ ಬಟ್ಟೆಬರಹ ಎಂಬ ಲಿಪಿ ಬಳಕೆಯಲ್ಲಿತ್ತು ಎಂಬುದನ್ನು ದೃಢಪಡಿಸಿದೆ. ಈ ಲಿಪಿಯನ್ನು ಬಟ್ಟೆಳುತು ಎಂದು ಗುರುತಿಸಲಾಗಿದ್ದು, ಇದು ಪ್ರಾಚೀನ ತುಳು ಲಿಪಿಯಾಗಿದೆ. ಬಳಕೆ ಮತ್ತು ಆಕಾರದಲ್ಲಿಯೂ ಹಲವು ಬದಲಾವಣೆಗಳಿವೆ. ಇದು ಮಲಯಾಳಂನಲ್ಲಿ ಕಂಡು ಬರುವುದಿಲ್ಲ. ಆಧುನಿಕ ಮಲಯಾಳಂ ಲಿಪಿಯು ಇದರಿಂದಲೇ ಉದ್ಭವವಾಯಿತು ಎಂದೂ ಹೇಳಲಾಗುತ್ತದೆ.
ಏಳನೇ ಶತಮಾನದ ತುಳುನಾಡು ಮತ್ತು ಮಲಬಾರ್ ನೊಂದಿಗೆ ಅರಬ್ ಮುಸ್ಲಿಮರ ನಂಟನ್ನು ಈಗ ಲಭ್ಯವಿರುವ ಹಲವು ಆಕರ ಗ್ರಂಥಗಳಲ್ಲಿ ಕಾಣಬಹುದು. ಹೆನ್ರಿ ಮಯೆರ್ಸ್, ಈಲಿಯಟ್, ಎಚ್.ಜಿ.ರೋವಿಲ್ಸನ್ ಮೊದಲಾದವರು ಕೂಡಾ ಈ ಅಭಿಪ್ರಾಯಕ್ಕೆ ಮನ್ನಣೆ ನೀಡಿದ್ದಾರೆ. ಸರ್ ಜಾನ್ ಸ್ಟರಕ್ ತನ್ನ ಮಲಬಾರ್ ಡಿಸ್ಟ್ರಿಕ್ಟ್ ಮ್ಯಾನುವಲ್ ನಲ್ಲಿ ಅರಬ್ ವ್ಯಾಪಾರಿಗಳು ಏಳನೇ ಶತಮಾನದಲ್ಲಿ ಮಲಬಾರ್ ಮತ್ತು ತುಳುನಾಡಿದಿನಲ್ಲಿ ವಾಸವಾಗಿದ್ದಾರೆಂದು ಬರೆದಿದ್ದಾರೆ.
ಮಂಗಳೂರು ಬ್ಯಾರಿಗಳ ಅತ್ಯಂತ ಪ್ರಮುಖ ಕೇಂದ್ರಗಳಲ್ಲೊಂದು. ತುಳುವರು ಅದನ್ನು ಕುಡ್ಲ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಆದರೆ ಬ್ಯಾರಿಗಳು ಅದನ್ನು ಮೈಕಾಲ ಎಂದು ಕರೆಯುತ್ತಿದ್ದರು. ನಾಥಪಂಥ ಮಿಷನರಿಗಳಿಂದಾಗಿ ಈ ಹೆಸರು ಬಂತೆಂದು ಹೇಳಗಾಗುತ್ತದೆ. ಮಾಯಾದೇವಿ ಎಂಬ ದೇವತೆ ಕದ್ರಿಯಲ್ಲಿ ವಾಸವಾಗಿದ್ದರು ಮತ್ತು ಅದು ಪ್ರಸಿದ್ಧ ಆರಾಧನಾ ಕೇಂದ್ರವಾಗಿ ಕ್ರಮೇಣ ತಲೆಯಿಂದ ನಿಂತಿತ್ತು. ಹೀಗಾಗಿ ಮಾಯಾಕಾಲ ಎಂಬುದು ಮೈಕಾಲ ಎಂದೂ ಬದಲಾಯಿತು. ಆದರೆ ಪ್ರೊ. ಬಿ.ಎಂ. ಇಚ್ಲಂಗೋಡು ಈ ವಾದವನ್ನು ಒಪ್ಪುವುದಿಲ್ಲ. ಅವರು ಮಂಗಳಾದೇವಿಯಿಂದ ನಾಥಪಂಥ ಪ್ರಚಾರವಾಗಿರುವುದನ್ನು ಉಲ್ಲೇಖಿಸಿದ್ದಾರೆ.. ಮಂಗಳಾದೇವಿ ಕೇರಳದಿಂದ ತಮ್ಮ ಭಕ್ತರೊಂದಿಗೆ ಮಂಗಳೂರಿಗೆ ಬಂದು ನೆಲೆಸಿದ್ದರು. ತುಳುನಾಡಿನಲ್ಲಿ ಅವರ ಪ್ರಭಾವಕ್ಕೆ ಸಾಕಷ್ಟು ಸಾಕ್ಷಾಧಾರಗಳಿವೆ. ಜೆಪ್ಪು ಸಮೀಪ ನಿರ್ಮಾಣಗೊಂಡ ಒಂದು ದೇವಸ್ಥಾನದವಿದ್ದು, ಈ ಪ್ರದೇಶವು ಇಂದು ಮಂಗಳಾದೇವಿ ಎಂಬ ಹೆಸರಿನಿಂದ ಪ್ರಖ್ಯಾತವಾಗಿದೆ.
ಇಂದು ಬ್ಯಾರಿ ಜಾಗೃತಿಯ ಒಂದು ಹೊಸ ಪರ್ವ ಆರಂಭವಾಗಿದೆ. ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ರಂಗಗಳಲ್ಲಿ ಮೂಡಿರುವ ಹೊಸ ನಾಯಕತ್ವವು ಸಮುದಾಯವನ್ನು ಸಮೃದ್ಧಿಯ ಹಾದಿಯತ್ತ ಮುನ್ನಡೆಸುತ್ತಿದೆ.
No comments:
Post a Comment