Friday, May 11, 2012

ಮಂಗಳೂರಿನ ನಿಜವಾದ ರೂವಾರಿ ಯು.ಶ್ರೀನಿವಾಸ ಮಲ್ಯ

ಉಳ್ಳಾಲ ಶ್ರೀನಿವಾಸ ಮಲ್ಯ ಈ ಹೆಸರು ಮಂಗಳೂರಿನ ಇತಿಹಾಸದ ಪುಟಗಳಲ್ಲಿ ಇಂದಿಗೂ ಅಮರ,ಅವರು ಆ ಕಾಲದಲ್ಲಿ ಮಂಗಳೂರಿನ ಕನಸನ್ನು ಕಟ್ಟಿರದಿದ್ದರೆ ಬಹುಷ ನಾವು ಇಂದು ಕಾಣುವ  ಭವ್ಯ ಮಂಗಳೂರನ್ನು ಊಹಿಸಲಿ ಆಸಾಧ್ಯ. ಸದ್ದುಗದ್ದಲ ಇಲ್ಲದೆ ಅವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ನೀಡಿದ ಕೊಡುಗೆ ಅನನ್ಯ. ಪ್ರಸಕ್ತ ಅವಿಭಜಿತ ದಕ್ಷಿಣ ಕನ್ನಡದ ಅಭಿವೃದ್ಧಿ ಚಿಂತನೆಯ ಮಟ್ಟಿಗೆ ಯು.ಎಸ್. ಮಲ್ಯರು ಪ್ರಾತಃಸ್ಮರಣೀಯರು.
 ಅಸಾಧಾರಣ ಬುದ್ಧಿವಂತಿಕೆ, ವ್ಯವಹಾರ ಕುಶಲತೆ ಹೊಂದಿರುವ ನಮ್ಮ ಕರಾವಳಿಯ ಕೊಂಕಣ ಸಾರಸತ್ವರು ಮತ್ತು ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯ ಈ ನೆಲದ ವಿಭಿನ್ನ ರಂಗಗಳಿಗೆ ಅಸಂಖ್ಯ ಮಹನೀಯರನ್ನು ನೀಡಿದೆ. ದೇಶಭಕ್ತ ಕಾರ್ನಾಡ್ ಸದಾಶಿವರಾಯರು, ಸಾಮಾಜಿಕ ಪರಿವರ್ತನೆಯ ಹರಿಕಾರ ಕುದ್ಮುಲ್ ರಂಗರಾಯರು, ಬ್ಯಾಂಕಿಂಗ್ ಆಂದೋಲನದ ರೂವಾರಿಗಳಲ್ಲೊಬ್ಬರಾದ ಅಮ್ಮೆಂಬಳ ಸುಬ್ಬರಾಯರು, ರಾಷ್ಟ್ರಕವಿ ಎನಿಸಿದ ಗೋವಿಂದ ಪೈಗಳು… ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಉಳ್ಳಾಲ ಶ್ರೀನಿವಾಸ ಮಲ್ಯ ಕೂಡಾ ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬದಿಂದ ಬಂದವರೇ.

ಶ್ರೀನಿವಾಸ ಮಲ್ಯರು 1902 ಇಸವಿ ನವಂಬರ 21ರಂದು ಜಿಲ್ಲೆಯ ಹೆಸರಾಂತ ಉಳ್ಳಾಲ ಮಲ್ಯ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಶ್ರೀ ಉಳ್ಳಾಲ ಮಂಜುನಾಥ ಮಲ್ಯ ಮತ್ತು ತಾಯಿ ಸರಸ್ವತಿ ಯಾನೆ ರುಕ್ಮಾಬಾಯಿ. ಹಿರಿಯ ಅಣ್ಣ ಮಾಧವ ಮಲ್ಯ, ಇನ್ನೊಬ್ಬ ತಮ್ಮ ಜಿಲ್ಲೆಯ ಹೆಸರಾಂತ ಸಾಮಾಜಿಕ ಮುಂದಾಳು ಡಾ. ಉಳ್ಳಾಲ ಪದ್ಮನಾಭ ಮಲ್ಯ (ಮಂಗಳೂರಿನ ರಥಬೀದಿಯ ಒಂದು ರಸ್ತೆಗೆ ಇವರ ಹೆಸರನ್ನು ಇಟ್ಟಿದ್ದಾರೆ). ಶ್ರೀಮತಿ ಭಾಮಿ ಸಂಜೀವಿ ಪಾಂಡುರಂಗ ಶೆಣೈ ಮತ್ತು ಉಪ್ಪಿನಂಗಡಿ ಶ್ರೀಮತಿ ಲಕ್ಷ್ಮೀ ನರಸಿಂಹ ಭಟ್ಟ ಇವರ ತಂಗಿಯರು.
ಸುರತ್ಕಲ್ NITK Eng ಕಾಲೇಜ್
ಸಾತ್ವಿಕ ಮತ್ತು ಸಂಪ್ರದಾಯ ಬದ್ಧ ವ್ಯಾಪಾರೀ ಕುಟುಂಬದಲ್ಲಿ ಜನಿಸಿದ ಶ್ರೀನಿವಾಸ ಮಲ್ಯರು, ಹಿರಿಯರ ಮಾರ್ಗದರ್ಶನದಲ್ಲಿ ಓರ್ವ ದೈವಭಕ್ತ ಮತ್ತು ದೇಶಭಕ್ತರಾಗಿ ಬೆಳೆದು ಬಂದರು.ಆಗ ಶ್ರೀನಿವಾಸ ಮಲ್ಯರಿಗೆ ಹದಿನೆಂಟರ ಹರೆಯ.1942ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಮಲ್ಯರು ಶ್ರೀರಂಗನಾಥ ದಿವಾಕರರೊಂದಿಗೆ ಕೊಯಂಬತ್ತೂರು ಮತ್ತು ಮಂಗಳೂರಿನಲ್ಲಿ ಸೆರೆವಾಸದಲ್ಲಿದ್ದರು. ಈ ಸಮಯದಲ್ಲವರು ದೀರ್ಘ ಅಸ್ವಾಸ್ಥ್ಯಕ್ಕೂ ಈಡಾದರು.
1947ರಲ್ಲಿ ರಾಷ್ಟ್ರ ಸ್ವತಂತ್ರವಾಯಿತು. ಈ ಹಂತದಲ್ಲಿ 1946ರಲ್ಲಿ ನೂತನವಾಗಿ ರಚನೆಗೊಂಡ ನಡುಗಾಲ ಸರಕಾರದ ಉದಯ ಮತ್ತು ಸಂವಿಧಾನ ರಚನಾ ಮಂಡಳಿಯ ಸದಸ್ಯರಾಗಿ ಮಲ್ಯರು ಕಾಂಗ್ರೆಸ್ ವರಿಷ್ಠರಿಂದ ನೇಮಕಗೊಂಡರು. 1950ರ ವರೆಗೆ ಈ ಕಾನ್ಸ್ಟಿಟ್ಯುಯನ್ಸಿ ಅಸೆಂಬ್ಲಿ ಸದಸ್ಯರಾದರು. ಅವರ ಕಾರ್ಯಕ್ಷೇತ್ರ ರಾಷ್ಟ್ರ ರಾಜಧಾನಿಗೆ ವರ್ಗಾವಣೆಗೊಂಡಿತು. ಭಾರತದಾದ್ಯಂತ ಅವರು ಜನಪ್ರಿಯರಾದರು. ಸ್ವತಂತ್ರ ಭಾರತದ ಚೊಚ್ಚಲ ಗೃಹ ಸಮಿತಿಯ ಸದಸ್ಯರಾಗಿ, ಅಖಿಲ ಭಾರತ ಕೈಗಾರಿಕಾ ಮಂಡಳಿಯ ಉಪಾಧ್ಯಕ್ಷ ರಾಗಿ, ಜವಾಬ್ದಾರಿಯ ಹುದ್ದೆಗಳನ್ನು ನಿರ್ವಹಿಸಿ ಜಿಲ್ಲೆಯ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಮಿಂಚಿಸಿದರು.
‘ಹೊಗಳಿಕೆ-ತೆಗಳಿಕೆಗಳಿಗೆ ಸೇರದ ಸೂಕ್ಷ್ಮಮತಿಯಾಗಿದ್ದ ಮಲ್ಯರು ಮಾತು ಕಮ್ಮಿ – ಕೆಲಸ ಹೆಚ್ಚು ಎಂಬ ಮಾತಿಗೆ ಉದಾಹರಣೆಯಂತಿದ್ದ, ಆಡಂಬರವಿಲ್ಲದ ಸಜ್ಜನ’ ಎಂಬುದಾಗಿ ನೇರನುಡಿಯ ಹಿರಿಯ ಪತ್ರಕರ್ತ ಶ್ರೀ ಬನ್ನಂಜೆ ರಾಮಾಚಾರ್ಯ ತಮ್ಮಂದು ಲೇಖನದಲ್ಲಿ ಬರೆದಿದ್ದಾರೆ. ಜನಪರ ಕಾಳಜಿ, ಅತ್ಯುತ್ಸಾಹ, ಅದ್ಭುತ ಗ್ರಹಣಶಕ್ತಿ, ಸಂಘಟನಾ ಚಾತುರ್ಯ – ಇವು ಅವರ ಶ್ರೇಷ್ಠ ವ್ಯಕ್ತಿತ್ವದ ಲಕ್ಷಣಗಳಾಗಿದ್ದವು.
ಇಂತಹ ಕಾರ್ಯದುರಂಧರ ಮಲ್ಯರನ್ನು ಅಂದಿನ ಭಾರತದ ಪ್ರಧಾನಿ ಜವಾಹರಲಾಲ ನೆಹರೂ ತಮ್ಮ ಒಡನಾಡಿಯನ್ನಾಗಿ ಮಾಡಿಕೊಂಡರು. ನೆಹರೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸಿನ ಅಧ್ಯಕ್ಷರಾಗಿದ್ದಾಗ ಮಲ್ಯರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿಕೊಂಡರು. ಆಗ ಮಲ್ಯರೊಂದಿಗೆ ಅದೇ ಹುದ್ದೆಯಲ್ಲಿದ್ದ ಇನ್ನಿಬ್ಬರೆಂದರೆ ಲಾಲ್ ಬಹಾದೂರ್ ಶಾಸ್ತ್ರಿಗಳು ಹಾಗೂ ಬಲವಂತರಾಯ್ ಮೆಹ್ತಾ.
1952ರಲ್ಲಿ ಪ್ರಥಮ ಲೋಕಸಭಾ ಚುನಾವಣೆ ನಡೆಯಿತು. ಶ್ರೀ ಮಲ್ಯರನ್ನು ನಿರಂತರವಾಗಿ ಲೋಕಸಭೆಗೆ ಆಯ್ಕೆಮಾಡಿ ಕಳುಹಿಸಿದುದು ಉಡುಪಿ ಕ್ಷೇತ್ರ. 1952, 1957, 1962 ಹೀಗೆ ಸತತ ಮೂರು ಬಾರಿ ಉಡುಪಿ ಕ್ಷೇತ್ರದಿಂದ ಅವರು ಗೆದ್ದು ಮುಂದಿನ ತಮ್ಮ ಜೀವಿತಾವಧಿಯ 17 ವರ್ಷಗಳ ಕಾಲವೂ ಪಾರ್ಲಿಮೆಂಟ್ ಸದಸ್ಯರಾಗಿದ್ದರು.
ರಾಷ್ಟ್ರ ರಾಜಕಾರಣದ ಜೊತೆಯಲ್ಲೇ ಮಲ್ಯರು ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ಹಳ್ಳಿಹಳ್ಳಿಗಳಲ್ಲಿ ಸಂಪರ್ಕ ರಸ್ತೆ, ಸೇತುವೆಗಳು, ಗುಡಿಕೈಗಾರಿಕೆ, ಉದ್ಯೋಗ ನಿರ್ಮಿತಿ, ಬೃಹತ್ ಕಾರ್ಖಾನೆ, ಜಲ ನಿರ್ವಹಣೆಗಳಿಗೆ ಆದ್ಯತೆ ನೀಡಿ, ಈ ರಂಗಗಳಲ್ಲಿ ಅದ್ಭುತ ಸಾಧನೆ ಮಾಡಿದರು.
ಸ್ವಾತಂತ್ರ್ಯಾನಂತರ ಈ ದೇಶ ಅಸಂಖ್ಯ ರಾಜಕಾರಣಿಗಳನ್ನು ಕಂಡಿದೆ. ಇವರ ನಡುವೆ ಜನೋಪಯೋಗಿಯಾಗಿ ಕಾರ್ಯನಿರ್ವಹಿಸಿ, ಜನಮಾನಸದಲ್ಲಿ ಉಳಿದವರು ಬೆರಳೆಣಿಕೆಯವರು. ಜನರ ನಿರೀಕ್ಷೆಗೂ ಮೀರಿ ದ.ಕ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ರೂವಾರಿಯಾಗಿ ವೌನವಾಗಿ ಶ್ರಮಿಸಿದವರು ಶ್ರೀನಿವಾಸ ಮಲ್ಯರು.
ಬಜಪೆ ವಿಮಾನ ನಿಲ್ದಾಣ, 1965ರಲ್ಲಿ ಸುರತ್ಕಲ್ನಲ್ಲಿ ಪ್ರಾದೇಶಿಕ ಎಂಜಿನಿಯರಿಂಗ್ ಕಾಲೇಜು, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳಗಳನ್ನು ಜೋಡಿಸುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ಶರಾವತಿ, ನೇತ್ರಾವತಿ, ಗಂಗೊಳ್ಳಿ ಮೊದಲಾದ ನದಿಗಳಿಗೆ 8 ಬೃಹತ್ ಸೇತುವೆ ನಿರ್ಮಾಣ, ಹಾಸನ-ಮಂಗಳೂರು ರೈಲುಮಾರ್ಗ ನಿರ್ಮಾಣ (ಈ ವೇಳೆಃ ಈ ಮಾರ್ಗ ಮತ್ತೆ ನೆನೆಗುದಿಗೆ ಬಿದ್ದಿದೆ) ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಆಧುನೀಕರಣ, ಉಳ್ಳಾಲದಲ್ಲಿ ನೇತ್ರಾವತಿ ನದಿಗೆ ಸೇತುವೆ, ಜಿಲ್ಲೆಗೆ ವಿದ್ಯುತ್ ಸಂಪರ್ಕ ವಿಸ್ತರಣೆ ಮುಂತಾದವು ಅವರ ಸಾಧನೆಗಳಲ್ಲಿ ಕೆಲವು. ಪಣಂಬೂರಿನ ಸರ್ವಋತು ಬಂದರು ಯೋಜನೆಯನ್ನು ಮಲ್ಪೆಗೆ ವರ್ಗಾಯಿಸಲು ಆ ಭಾಗದಲ್ಲಿ ಒತ್ತಡಗಳಿದ್ದರೂ, ಹಾಗೊಂದು ವೇಳೆ ಆದಲ್ಲಿ ಯೋಜನೆಯೇ ಬೇರೆ ರಾಜ್ಯಕ್ಕೆ ಹೋದೀತು, ಅಲ್ಲದೆ ಮಂಗಳೂರು ಪ್ರಮುಖ ವ್ಯಾಪಾರೀ ಕೇಂದ್ರವಾಗಿರುವುದರಿಂದ ಈ ಸರ್ವಋತು ಬಂದರು ಮಂಗಳೂರಿನಲ್ಲೇ ಆಗುವಂತೆ ಮಲ್ಯರು ನೋಡಿಕೊಂಡರು.
ಒಂದು ಪುಟ್ಟ ಕೈಚೀಲ ಹಿಡಿದುಕೊಂಡು ಏಕಾಂಗಿಯಾಗಿ ಮಲ್ಯರು ಮನೆಯಿಂದ ಹೊರಟರೆಂದರೆ ಜಿಲ್ಲೆಗೆ ಏನೋ ಹೊಸ ಯೋಜನೆ ಬರಲಿದೆ ಎಂದೇ ಅರ್ಥ. ಯಾವುದೇ ಹಳ್ಳಿಗೊಂದು ರಸ್ತೆ ಬೇಕೆಂದರೆ ಸಂಬಂಧಪಟ್ಟ ಇಲಾಖೆಯ ಸಚಿವರಿಗೆ ದುಂಬಾಲು ಬಿದ್ದು ಮಂಜೂರು ಮಾಡಿಸಿಕೊಂಡು, ಅದಕ್ಕೆ ಸಂಬಂಧಿಸಿದ ಹಣಕಾಸು ಸಮಿತಿಯ ಕಚೇರಿಗೆ ಕೂಡಾ ನಿತ್ಯವೂ ಅಲೆದು ಹಣವನ್ನೂ ಬಿಡುಗಡೆ ಮಾಡಿಸಿಕೊಂಡು, ನಂತರ ಜಿಲ್ಲೆಯಲ್ಲಿ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಮರ್ಪಕ ಸೂಚನೆಗಳನ್ನು ನೀಡುತ್ತಾ ಕೆಲಸವು ಮಿಂಚಿನ ವೇಗದಲ್ಲಿ ನಡೆಯುವಂತೆ ಅವರು ನೋಡಿಕೊಳ್ಳುತ್ತಿದ್ದರು. ತಾವು ಮಂಗಳೂರಿಗೆ ಬಂದಾಗಲೆಲ್ಲಾ ಅಂತಹ ಕಾಮಗಾರಿಗಳು ನಡೆಯುವ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಕೆಲಸ ಕಾರ್ಯ, ಅವುಗಳ ಗುಣಮಟ್ಟವನ್ನು ಪರೀಕ್ಷಿಸುತ್ತಿದ್ದರು.
ಆ ದಿನಗಳಲ್ಲಿ ಖಾದಿಧಾರಿ ಮಲ್ಯರು ತಮ್ಮ ಹಿಂದೆ  ಪಟಾಲಂ ಅನ್ನು ಇರಗೊಡುತ್ತಿರಲಿಲ್ಲ. ಅವರು ಮನೆಯಿಂದ ಹೊರಬೀಳುತ್ತಿದ್ದಂತೆಯೇ ಅಥವಾ ಸಾರ್ವಜನಿಕ ಸ್ಥಳಗಳಿಗೆ ಹೋಗುತ್ತಿದ್ದಂತೆಯೇ ಚಂಡೆ, ಕೊಂಬು ಕಹಳೆಗಳ ಅಬ್ಬರ ಬೇಕಿರಲಿಲ್ಲ. ಕಲ್ಲಡ್ಕ ಬೊಂಬೆಗಳೂ ಇರಬೇಕಿರಲಿಲ್ಲ. ತಳಿರು ತೋರಣಗಳನ್ನೂ ಇಷ್ಟ ಪಡುತ್ತಿರಲಿಲ್ಲ. ಪತ್ರಿಕಾಗೋಷ್ಠಿಗಳನ್ನು ಅವರು ಕರೆಯುತ್ತಿರಲೇ ಇಲ್ಲ. ತಮ್ಮ ಸಾಧನೆಗಳ ಬಗ್ಗೆ ಎಂದೂ ಅವರು ಪತ್ರಿಕಾ ಪ್ರಕಟಣೆಗಳನ್ನು ನೀಡಿರಲಿಲ್ಲ. ಅವರು ಅಭಿವೃದ್ದಿ ಚಟುವಟಿಕೆಗಳನ್ನೇ ತಪಸ್ಸು ಎಂದುಕೊಂಡಿದ್ದ ಮಹಾಯೋಗಿ. ಜತೆಗೆ ನವಮಂಗಳೂರು ಬಂದರು, ನೇತ್ರಾವತಿ ಸೇತುವೆಗಳಂತಹ ನಿರ್ಮಾಣಗಳನ್ನೇ ದೇವಸ್ಥಾನಗಳೆಂಬ ತನ್ಮಯತೆಯಿಂದ ಆರಾಧಿಸಿದವರು.
NH66 ರಲ್ಲಿ U.s. Mallyar ಪ್ರತಿಮೆ
ಯು.ಎಸ್. ಮಲ್ಯರು ಎಂದಿಗೂ ಗುತ್ತಿಗೆದಾರರೊಡನೆ ಕಮಿಷನ್ ದಂಧೆ ನಡೆಸಲಿಲ್ಲ. ಜಾತ್ಯಸ್ಥ ಅಧಿಕಾರಿಗಳನ್ನು ಬೆನ್ನಿಗೆ ಇಟ್ಟುಕೊಂಡು ಕುಣಿಯಲಿಲ್ಲ. ದಕ್ಷ ಅಧಿಕಾರಿಗಳನ್ನು ಎಲ್ಲೆಲ್ಲಿಂದಲೋ ಇಲ್ಲಿಗೆ ವರ್ಗಾಯಿಸಿಕೊಂಡು ಉತ್ತಮವಾದುದನ್ನೇ ಸಾಧಿಸಿದರು. ಇದಲ್ಲದೆ ಸುಮಾರು ಮೂರು ದಶಕಗಳ ಕಾಲ ಕೆನರಾ ಬ್ಯಾಂಕಿನ ನಿರ್ದೇಶರಾಗಿದ್ದು ಕೊಂಡು ಆ ಬ್ಯಾಂಕಿನ ಅಭಿವೃದ್ಧಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.

ಮಲ್ಯರಲ್ಲಿ ಇನ್ನಷ್ಟು ಅಭಿವೃದ್ಧಿಯ ಕನಸುಗಳಿದ್ದವು. ದ.ಕ.ದ ಎಲ್ಲ ನದಿ, ಹಳ್ಳಗಳಿಗೆ ಅಣೆಕಟ್ಟು ನಿರ್ಮಿಸುವ ಯೋಜನೆಯಂತಹ ಇನ್ನೂ ಹಲವು ಮುನ್ನೋಟಗಳು ಅವರೆದುರು ಇದ್ದವು. ಆದರೆ ಅವರ ಆರೋಗ್ಯ ಹದಗೆಡುತ್ತ ಸಾಗಿತ್ತು. ಸಚೇತಕ ಹುದ್ದೆಯನ್ನೂ ತೊರೆದರು. ಮಲ್ಯ ದಂಪತಿಗೆ ಸಂತಾನಭಾಗ್ಯವಿಲ್ಲದ ಕೊರಗು ಕಾಡುತ್ತಿತ್ತು. ಕೊನೆಗೆ ತಮ್ಮ ಸಮೀಪ ಕುಟುಂಬದ 13 ವರ್ಷ ವಯಸ್ಸಿನ ಬಾಲಕ ಜನಾರ್ದನ ಪ್ರಭು ಎಂಬವರನ್ನು ದತ್ತುಪುತ್ರನಾಗಿ ಸ್ವೀಕರಿಸಿ, ತಮ್ಮ ಸ್ವಂತ ಮಗನಂತೆಯೇ ಸಲಹಿದರು.
ಮುಂದಿನ ನಾಲ್ಕು ವರ್ಷಗಳಲ್ಲಿ ಅವರ ಆರೋಗ್ಯ ಮತ್ತೆ ಮತ್ತೆ ಕಾಡತೊಡಗಿತು. ಅದಾಗಲೇ 3-4 ಬಾರಿ ಹೃದಯಾಘಾತ ಸಂಭವಿಸಿತ್ತು. 1965ರ ಡಿಸೆಂಬರ್ 19ರಂದು ಮಲ್ಯರು ಕೆನರಾ ಬ್ಯಾಂಕ್ ಬೋರ್ಡ್ ಮೀಟಿಂಗಿಗೆಂದು ದೆಹಲಿಯಿಂದ ಬೆಂಗಳೂರಿಗೆ ವಿಮಾನ ಪ್ರಯಾಣಕ್ಕೆ ಹೊರಟಿದ್ದರು. ಕಾರಿನಲ್ಲಿ ಮಲ್ಯರಿಗೆ ಹೃದಯಾಘಾತವಾಯಿತು. ಅಲ್ಲಿಂದ ದೆಹಲಿಯ ಆಸ್ಪತ್ರೆಗೆ ಅವರನ್ನು ಒಯ್ಯಲಾಯಿತು. ಅಲ್ಲಿ ಆ ಚೇತನ ನಿಶ್ಚಲವಾಯಿತು. ಆಗ ಅವರಿಗೆ 63 ವರ್ಷ ವಯಸ್ಸು.
ಅವರ ಪಾರ್ಥಿವ ಶರೀರವನ್ನು ಅಂದಿನ ಪ್ರಧಾನಿ ಲಾಲ್ಬಹಾದೂರ್ ಶಾಸ್ತ್ರಿಗಳ ತುರ್ತು ಸಂದೇಶದೊಂದಿಗೆ ಶಾಸ್ತ್ರಿಗಳದ್ದೇ ವಿಮಾನದಲ್ಲಿ ಮಂಗಳೂರಿಗೆ ತರಲಾಯಿತು. ಅಸಂಖ್ಯ ಅಭಿಮಾನಿಗಳು ಧಾವಿಸಿ ಅಂತಿಮ ನಮನ ಸಲ್ಲಿಸಿದರು. ಮರುದಿನ ಉರ್ವ ಬಳಿಯ ಸ್ಮಶಾನದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಹೀಗೆ ಕರಾವಳಿ ಕರ್ನಾಟಕದ ಅನರ್ಘ್ಯ ರತ್ನವೊಂದು ಪರಮಾತ್ಮನಲ್ಲಿ ಲೀನವಾಯಿತು. ಉಳ್ಳಾಲ ಶ್ರೀನಿವಾಸ ಮಲ್ಯರು ನಡೆಸಿದ ಅಭಿವೃದ್ಧಿ ಕಾರ್ಯಗಳು ಅವರ ಸಫಲ ಜೀವನದ ಸಾಕ್ಷಿಗಳಾಗಿ ನಮ್ಮೆದುರಿಗಿವೆ.
ತಮಗೆ ಆ ಕಾಲದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಹಾಗೂ ಕಾಂಗ್ರೆಸ್ ಪಕ್ಷದಲ್ಲಿದ್ದ ಅಪಾರ ಪ್ರಭಾವ, ಅಧಿಕಾರಸ್ಥರೊಂದಿಗಿನ ನಿಕಟ ಸಂಬಂಧಗಳನ್ನು ಅವರು ತಮ್ಮ ವೈಯಕ್ತಿಕ ಬೆಳವಣಿಗೆಗಾಗಿ ಬಳಸಿಕೊಳ್ಳಲಿಲ್ಲ. ಈ ಎಲ್ಲಾ ಸಂಬಂಧ, ಪ್ರಭಾವಗಳನ್ನು ಬಳಸಿಕೊಂಡು ದಕ್ಷಿಣ ಕನ್ನಡ ಜಿಲ್ಲೆಯ ಸರ್ವತೋಮುಖ ಬೆಳವಣಿಗೆಗೆ ಮುಖ್ಯ ಕಾರಣರಾದವರು ಈ ವ್ಯವಹಾರಶೀಲ ಮುತ್ಸದ್ದಿ ಮಲ್ಯರು ಎಂದರೆ ಅತಿಶಯೋಕ್ತಿಯಂತು ಅಲ್ಲ. ಮೂರು ಸಲ ಲೋಕಸಭಾ ಸದಸ್ಯರಾಗಿದ್ದ ಮಲ್ಯರು ಎಂದೂ ಕೂಡ ಸಂಸತ್ತಿನಲ್ಲಿ ಮಾತನಾಡಿರಲೇ ಇಲ್ಲ. ಚುನಾವಣಾ ಪ್ರಚಾರದ ಕಾಲದಲ್ಲಿಯೂ ಭಾಷಣ ಮಾಡಿದ್ದೇ ಅಪರೂಪ. ಸಾರ್ವಜನಿಕ ಸಭೆಗಳೆಂದರೆ ಬಲು ದೂರ ಇರುತ್ತಿದ್ದ ಇವರು ಆ ಕಾಲದಲ್ಲಿ ಅದೆಷ್ಟು ಪ್ರಭಾವಿಯಾಗಿದ್ದರೆಂದರೆ ತಮ್ಮ ಗೆಳೆಯ ಬಿ.ಡಿ. ಜತ್ತಿಯವರನ್ನು ಮುಖ್ಯಮಂತ್ರಿ ಯಾಗಿಸುವಲ್ಲಿ ಮುಖ್ಯಪಾತ್ರ ವಹಿಸಿದ್ದರು.
 ಮುಂಬೈನಲ್ಲಿ ದಕ್ಷಿಣ ಕನ್ನಡದವರ ಹೋಟೆಲ್ ಒಂದಕ್ಕೆ ನಿತ್ಯವೂ ಕೆ.ಕೆ. ಪೈಯವರು ಊಟಕ್ಕೆಂದು ಹೋಗುತ್ತಿದ್ದರಂತೆ. ಅವರ ಎದುರಿನ ಮೇಜಲ್ಲಿ ಸಾಮಾನ್ಯ ಉಡುಪು ಧರಿಸಿದ್ದವರೊಬ್ಬರು ಬಂದು ಊಟ ಮಾಡಿ ಎದ್ದು ಹೋಗುತ್ತಿದ್ದರಂತೆ. ಮಾತಿಲ್ಲ, ಕತೆ ಇಲ್ಲ. ಅತ್ತ ಇತ್ತ ದೃಷ್ಟಿ ಹರಿಸುತ್ತಿದ್ದುದು ಕಡಿಮೆಯಂತೆ. ಹೀಗೆಯೇ ಒಂದು ದಿನ ಕೆ.ಕೆ. ಪೈಯವರು ಆ ಹೋಟೆಲಿಗೆ ಹೋದಾಗ ಹೊರಗಡೆ ಸುತ್ತಮುತ್ತ ಪೋಲಿಸರ ಟೊಪ್ಪಿಗೆಗಳು ಕಾಣಿಸುತ್ತಿದ್ದವಂತೆ. ಅದಕ್ಕೆ ಪೈಯವರು ಆ ಹೋಟೆಲ್ ಮಾಲೀಕರನ್ನು ‘ಇದೇನಿದು ಪೊಲೀಸರು’ ಎಂದು ಪ್ರಶ್ನಿಸಿದರಂತೆ. ‘ನಿಮಗೆ ಗೊತ್ತಿಲ್ಲವ. ಆ ಶ್ರೀನಿವಾಸ ಮಲ್ಯರನ್ನು ಹುಡುಕಿಕೊಂಡು ಬಂದಿದ್ದಾರೆ’ ಎಂದರಂತೆ. ಆಗ ‘ಅವರು ಇಲ್ಲಿಗೆ ಬಂದಿದ್ದರೇ’ ಎಂದು ಪೈಯವರು ಪ್ರಶ್ನಿಸಿದಾಗ, ‘ನಿಮ್ಮ ಎದುರಿನ ಮೇಜಲ್ಲಿಯೇ ಕುಳಿತು ಊಟ ಮಾಡುತ್ತಿದ್ದರಲ್ಲಾ ಅವರೇ’ ಎಂದಿದ್ದರಂತೆ. ಆಗ ಆ ಸರಳ, ನಿರ್ಲಿಪ್ತನಂತಿದ್ದ ವ್ಯಕ್ತಿ ಶ್ರೀನಿವಾಸ ಮಲ್ಯರೆಂದು ಗೊತ್ತಾದಾಗ ಕೆ.ಕೆ. ಪೈಯವರಿಗೆ ದಿಗ್ಭ್ರಮೆ. ನಂತರದ ದಿನಗಳಲ್ಲಿ ಇವರಿಬ್ಬರ ನಡುವೆ ಉತ್ತಮ ಒಡನಾಟ ಅರಳಿತ್ತು.
  ಶ್ರೀನಿವಾಸ ಮಲ್ಯರು ತಮ್ಮ ಜೀವಿತಾವಧಿಯಲ್ಲಿ ತಮಗಾಗಿ, ತಮ್ಮ ಬಂಧುಗಳಿಗಾಗಿ ಯಾವುದೇ ಆಸ್ತಿ ಮಾಡಲಿಲ್ಲ. ಅವರ ಸಾವಿನ ನಂತರ ಬಡತನದ ಬಾಳ್ವೆ ನಡೆಸಿದ ಅವರ ಪತ್ನಿ ಇಂದಿರಮ್ಮ ಅವರು ಕೆಲವು ವರ್ಷಗಳ ಹಿಂದೆ ತೀರಿಕೊಂಡರು. ಶ್ರೀನಿವಾಸ ಮಲ್ಯರ ಜನ್ಮಶತಾಬ್ದಿಯ ವರ್ಷವಾಗಿದ್ದ 2002ರಲ್ಲಿ ಮಂಗಳೂರಿನ ವಿವಿಧ ಕಡೆ ಹಲವು ಹತ್ತು ಕಾರ್ಯಕ್ರಮಗಳು ನಡೆದಿದ್ದವು. ಅವರ ಸರಳತೆ, ಪ್ರಾಮಾಣಿಕತೆ, ದಕ್ಷತೆಯ ಬಗ್ಗೆ ಬಹಳಷ್ಟು ಜನ ಬಹಳಷ್ಟು ವಿಚಾರಗಳನ್ನು ಮಾತಾಡಿದ್ದು ಇವತ್ತು ನೆನಪಾಗಿ ಉಳಿದಿವೆ.

ಮಲ್ಯರ ನೆನಪು ಅ 'ಮರ'


ಆಧುನಿಕ ಮಂಗಳೂರಿನ ಶಿಲ್ಪಿ ಉಳ್ಳಾಲ ಶ್ರೀನಿವಾಸ ಮಲ್ಯರ ನೆನಪನ್ನು ಮರವೊಂದು ಅಮರಗೊಳಿಸುತ್ತಿದೆ ! 107 ವರ್ಷಗಳ ಹಿಂದೆ ಹುಟ್ಟಿ (ಜನನ: ನ. 21, 1902) ತಾನು ಕಟ್ಟಿದ ಸ್ಥಾವರಗಳ ಮೂಲಕವೇ ಚಿರಸ್ಥಾಯಿಯಾಗಿ ಉಳಿದ ಮಲ್ಯರ ಬದುಕನ್ನು ಅಜರಾಮರಗೊಳಿಸುವ ಈ ಮರ ಇರುವುದು ಮಂಗಳೂರಿನ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ ಎದುರು. ಅಲ್ಲಿರುವ ಸಣ್ಣ ಅಶ್ವತ್ಥ ಮರವನ್ನು ಮಲ್ಯರ 60ನೇ ಹುಟ್ಟುಹಬ್ಬದ ಸಂದರ್ಭ 1961ರಲ್ಲಿ ನೆಟ್ಟಿದ್ದು.
ಮಲ್ಯರು ತುಂಬ ಸಂಕೋಚ ಸ್ವಭಾವದವರು. ಯಾವುದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಅವರನ್ನು ತುಂಬ ಒತ್ತಾಯಿಸಿ ಆವತ್ತು ಜನ್ಮ ಷಷ್ಟ್ಯಬ್ದ ಆಚರಣೆಗೆ ಒಪ್ಪಿಸಲಾಗಿತ್ತು.
ಕಾಂಗ್ರೆಸ್ ನಾಯಕರಾದ ಟಿ.ಎ. ಪೈ, ಕೆ.ಕೆ. ಶೆಟ್ಟಿ ಡಾ. ನಾಗಪ್ಪ ಆಳ್ವ, ಸಾಮ್ರಾಜ್ಯರು ಸೇರಿದಂತೆ ಹಲವು ಪ್ರಮುಖ ನಾಯಕರು 2000 ಜನ ಸೇರಿದ್ದ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಲ್ಲರೂ ಸಾಧನೆಯನ್ನು ಹೊಗಳುತ್ತಿದ್ದಾಗ ಮಲ್ಯರು ಗುಬ್ಬಚ್ಚಿಯಂತೆ ಕುಳಿತಿದ್ದರಂತೆ. ಅವತ್ತೇ ದೇವಸ್ಥಾನದ ಮುಂದೆ ಒಂದು ಅಶ್ವತ್ಥ ಗಿಡವನ್ನು ಮಲ್ಯರ ಕೈಯಲ್ಲಿ ನೆಡಿಸಲಾಗಿತ್ತು. ಇದಕ್ಕೆ ಮತ್ತೊಂದು ಕಾರಣವೂ ಇತ್ತು. ಶ್ರೀನಿವಾಸ ಮಲ್ಯ-ಇಂದಿರಾ ಮಲ್ಯ ದಂಪತಿಗೆ ಮಕ್ಕಳಿರಲಿಲ್ಲ. ಹಾಗಾಗಿ ಸಂಪ್ರದಾಯದಂತೆ ಅಶ್ವತ್ಥ ವೃಕ್ಷವನ್ನು ಮಗುವಾಗಿ ಸ್ವೀಕರಿಸಿದ್ದರು. ಅಶ್ವತ್ಥ ವೃಕ್ಷದಲ್ಲಿ ಅದೆಷ್ಟೋ ಸಾವಿರ ಎಲೆಗಳು ಮೂಡಿದಾಗ ಉಪನಯನ ಮತ್ತು ಮದುವೆ ಮಾಡಿಸಬೇಕು ಎನ್ನುವ ಸಂಪ್ರದಾಯವಿದೆ. ಆದರೆ, ಅಷ್ಟುಕಾಲ ಮಲ್ಯರು ಬದುಕಲಿಲ್ಲ. 1965ರ ಜನವರಿ 19ರಂದು ಅವರು ಕೊನೆಯುಸಿರೆಳೆದರು. ಅಷ್ಟಾದರೂ ಅವರ ಕುಟುಂಬಿಕರು ಮರದೊಂದಿಗಿನ ಭಾವನಾತ್ಮಕ ಸಂಬಂಧವನ್ನು ಬಿಡಲಿಲ್ಲ, 1977ರ ಏಪ್ರಿಲ್ 26ರಂದು ಶ್ರೀನಿವಾಸ ಮಲ್ಯರ ಅಣ್ಣ ಡಾ. ಯು.ಪಿ. ಮಲ್ಯರ ಪುತ್ರ ಮೋಹನ ಮಲ್ಯರು ಮತ್ತು ಪತ್ನಿ ತಾರಾ ಮಲ್ಯ ಅವರ ನೇತೃತ್ವದಲ್ಲಿ ಮರಕ್ಕೆ ಉಪನಯನ ಮತ್ತು ಮದುವೆಯನ್ನು ಭಾರಿ ಗೌಜಿಯಲ್ಲಿ ನಡೆಸಲಾಗಿತ್ತು.47 ವರ್ಷಗಳ ಹಿಂದೆ ನೆಟ್ಟ ಆ ಗಿಡ ಯು.ಎಸ್. ಮಲ್ಯರ ಪ್ರತಿನಿಧಿಯಂತೆ ನೂರಾರು ಮಂದಿಗೆ ಆಶ್ರಯ, ನೆರಳು ನೀಡುತ್ತಿದೆ.









No comments:

Post a Comment