ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕೆಂದರೆ ಎಲ್ಲರ ಮುಂದೆ ಮೂಡುವ ದೃಶ್ಯ `ಗಡಾಯಿ ಕಲ್ಲು'. ಬೆಳ್ತಂಗಡಿ
ತಾಲೂಕಿನಲ್ಲೇ ಅತ್ಯಂತ ಆಕರ್ಷಣೆಯ, ಚಾರಣಿಗರಿಗೆ, ಪ್ರವಾಸಿಗರಿಗೆ ಪ್ರಿಯ ತಾಣವಾಗಿ ಈ
ಕಲ್ಲು ವಿರಾಜಿಸುತ್ತಿದೆ.
ಕುದುರೆ ಮುಖ ರಾಷ್ಟ್ರೀಯ ಉದ್ಯಾನವನದಲ್ಲಿರುವ `ನಡ' ಗ್ರಾಮಕ್ಕೆ ಸೇರಿರುವ ಮತ್ತು ರಾಜ್ಯ ಹೆದ್ದಾರಿಗೆ ಸನಿಹದಲ್ಲಿರುವ ಈ
ಗಡಾಯಿಕಲ್ಲು ಹಲವಾರು ಐತಿಹ್ಯಗಳನ್ನೂ ಚಾರಿತ್ರಿಕ ದಾಖಲೆಗಳನ್ನೂ ಹೊಂದಿದೆ. ಅದಮ್ಯ
ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಈ ಕಲ್ಲು ಪಶ್ಚಿಮ ಘಟ್ಟದ ಹಿನ್ನಲೆಯೊಂದಿಗೆ
ಶೋಭಿಸುತ್ತಾ ಚಾರಣಿಗರನ್ನು, ಪ್ರಕೃತಿ ಪ್ರಿಯರನ್ನು ತನ್ನೆಡೆಗೆ ಕೈ ಬೀಸಿ
ಕರೆಯುತ್ತಿದೆ.
ಸಮುದ್ರ ಮಟ್ಟದಿಂದ 1788 ಅಡಿ
ಎತ್ತರದಲ್ಲಿದೆ ಗಡಾಯಿಕಲ್ಲು. ಇದರ ಮೇಲ್ಭಾಗದಲ್ಲಿ ನರಸಿಂಹಗಡ ಅಥವಾ ಜಮಲಾಗಡ ಎಂಬ ಕೋಟೆ
ಕಾಣಬಹುದಾಗಿದೆ. 2,800 ಮೆಟ್ಟಿಲುಗಳನ್ನೇರಿದಾಗ ಜಮಲಾಗಡದ ಮೇಲ್ಭಾಗ ತಲುಪಬಹುದು.
ಗಡಾಯಿಕಲ್ಲಿನ ಮೇಲಕ್ಕೇರುತ್ತಾ ಸಾಗಿದಂತೆ ಒಂದು ದ್ವಾರ ಸಿಗುತ್ತದೆ. ಈ ದ್ವಾರದ ನಂತರ
ಕಲ್ಲನ್ನೇ ಕಡಿದು ವಿನ್ಯಾಸಗೊಳಿಸಿ ಮೆಟ್ಟಿಲು ರಚಿಸಲ್ಪಟ್ಟಿದೆ. ತುಂಬಾ ಕಡಿದಾದ ಈ
ಮೆಟ್ಟಿಲುಗಳ ಮೇಲೆ ಸಾಗುವುದೇ ಒಂದು ಪ್ರಯಾಸ ಮತ್ತು ಸಾಹಸದ ಕಾರ್ಯ.
ಇಂಡೋ ಸಾರ್ಸೆನಿಕ್
ಶೈಲಿಯನ್ನು ಹೋಲುವ ಶಿಲ್ಪ ಚಿತ್ರಗಳು ಇಲ್ಲಿನ ಒಂದನೇ ಮಹಾ ದ್ವಾರಗಳಲ್ಲಿ
ಕಂಡುಬರುತ್ತವೆ. ಗಡಾಯಿಕಲ್ಲಿನ ಮೇಲ್ಭಾಗದಲ್ಲಿ ಎರಡು ಕಟ್ಟಡಗಳನ್ನು ಕಾಣಬಹುದಾಗಿದೆ.
ಸುಣ್ಣದ ಕಲ್ಲಿನ ಗಾರೆಯಿಂದ ಇದನ್ನು ನಿರ್ಮಿಸಿದ್ದು ಶಸ್ತ್ರಾಸ್ರಗಳನ್ನು ಮತ್ತು ಮದ್ದು ಗುಂಡುಗಳನ್ನು ಸಂಗ್ರಹಿಸಲು ನಿರ್ಮಿಸಲಾಗಿದೆ. ಎರಡನೇ
ಕಟ್ಟಡದಲ್ಲಿ ಕೋವಿ ಕಿಂಡಿ ಕಾಣಬಹುದು. ಈ ಕಲ್ಲಿನ ಮೇಲ್ಭಾಗದಲ್ಲಿ ಅನೇಕ ಕಟ್ಟಡಗಳ ಅವಶೇಷಗಳು ಸೂಕ್ಷ್ಮವಾಗಿ ಗಮನಿಸಿದರೆ ಕಂಡುಬರುತ್ತವೆ.
ಇವೆಲ್ಲವೂ ಸೈನಿಕರು ಉಳಿಯುತ್ತಿದ್ದ
ಮತ್ತು ಆಹಾರ ದಾಸತಾನು ಕೊಠಡಿಗಳಾಗಿರಬಹುದೆಂದು ಊಹಿಸಬಹುದಾಗಿದೆ.
ಗಡಾಯಿಕಲ್ಲಿನ ಇನ್ನೊಂದು ವೈಶಿಷ್ಟ್ಯವೆಂದರೆ ಬಿರು ಬೇಸಗೆಯಲ್ಲೂ ಸದಾ ನೀರಿರುವ ಒಂದು ಕೊಳವಿರುವುದು ಇಲ್ಲಿನ ವೈಶಿಷ್ಟ್ಯಗಳ್ಲಿ ಒಂದು.ಇಲ್ಲೇ ತುಸು ನಡೆದು ಮುಂದೆ ಸಾಗಿದರೆ ಸುರಂಗ ಮಾರ್ಗ ಸಿಗುತ್ತದೆ.ಅದರ ಮೂಲಕ ಬಾಗಿ ಸಾಗಿದರೆ ತುತ್ತ ತುದಿಯಲ್ಲಿರುವ ಕಟ್ಟಡದ ಸಮೀಪ ತಲುಪಲು ಸಾಧ್ಯವಾಗುತ್ತದೆ.
ಕೋಟೆಯೊಳಗೆ
ಎರಡು ಬೀಸುವ ಕಲ್ಲು ಕಾಣುತ್ತವೆ. ಮೈಸೂರಿನ ಹುಲಿ ಟಿಪ್ಪು ಸುಲ್ತಾನ್ ಈ ಕೋಟೆಯನ್ನು ವಶಪಡಿಸಿ ತನ್ನ ತಾಯಿಯ ಹೆಸರನ್ನು ಇಟ್ಟರು.ಟಿಪ್ಪು ಸುಲ್ತಾನ್ ಈ ಕೋಟೆಯನ್ನು ಕೇಂದ್ರೀಕರಿಸಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದರು.ನರಸಿಂಹಗಡ,
ಜಮಲಾಗಡ, ಜಮಲಾಬಾದ್ ಇತ್ಯಾದಿ ಹೆಸರುಗಳಿಂದ ಪ್ರಸಿದ್ಧಿ ಪಡೆದಿರುವ ಗಡಾಯಿ ಕಲ್ಲಿನ
ಬಗ್ಗೆ ವಿದೇಶಿಯರೂ ಆಕರ್ಷಿತರಾಗಿದ್ದಾರೆ. ಈ ಕಲ್ಲಿನ ಬಗ್ಗೆಯೇ ವಿದೇಶಿಗರೂ ಸಾಕಷ್ಟು
ಬರಹಗಳನ್ನು ಪ್ರಕಟಿಸಿದ್ದಾರೆ. 1802ರಲ್ಲಿ ಈ ಪ್ರದೇಶವನ್ನು ಸಂದರ್ಶಿಸಿದ ಆಂಗ್ಲ
ಪ್ರವಾಸಿಗ ಪ್ರಾನ್ಸಿಸ್ ಬುಕಾನನ್ `ಎ ಜರ್ನಿ ಫ್ರಂ ಮೆಡ್ರಾಸ್ ಥ್ರೂ ದ. ಕಂಟ್ರೀಸ್ ಆಫ್
ಮೈಸೂರು, ಕೆನರ ಅಂಡ್ ಮಲಬಾರ್' ಎಂಬ ಕೃತಿಯ ಫೆಬ್ರವರಿ 3ರ ವರದಿಯಲ್ಲಿ `ಹಿಸ್ಟ್ರಿ ಆಫ್
ಜಮಲಾಬಾದ್ ' ಎಂಬ ಶೀರ್ಷಿಕೆಯಲ್ಲಿ ಈ ಕೋಟೆಯ ಬಗ್ಗೆ ದಾಖಲಿಸುವ
ಪ್ರಯತ್ನ ಮಾಡಿದ್ದಾರೆ.
ಪಾಶಿಗುಂಡಿ ಪ್ರಪಾತ ಇಲ್ಲಿನ ವಿಶೇಷಗಳಲ್ಲಿ ಮತ್ತೊಂದು, ಯುದ್ದಗಳ್ಲಿ ಸೆರೆ ಸಿಕ್ಕ ಅನೇಕರನ್ನು ಇಲ್ಲಿಂದ ಕೆಳಗೆ ನೂಕಿ ಕೊಂದು ಹಾಕಿದ ವಿಷಯಗಳು ಇತಿಹಾಸದ ಪುಟಗಳಲ್ಲಿ ಕಾಣಸಿಗುತ್ತದೆ. ಇಲ್ಲಿನ ನೆರೆಯ ಬಂಗಾಡಿಯ ಇತಿಹಾಸವನ್ನು ಕೆದಕಿದರೆ ಈ ಬಗ್ಗೆ ಸ್ಪಷ್ಟ ಮಾಹಿತಿ ದೊರಕುತ್ತದೆ.
ಭಾರತೀಯ
ಪುರಾತತ್ವ ಸರ್ವೇಕ್ಷಣ ಇಲಾಖೆ ಪ್ರಾಚೀನ ಸ್ಮಾರಕಗಳ ರಕ್ಷಣೆಯ ಜವಾಬ್ದಾರಿಯನ್ನು
ಹೊತ್ತಿದೆ. ಗಡಾಯಿ ಕಲ್ಲು ಕೂಡಾ ಇದೇ ಇಲಾಖೆಯ ವತಿಯಿಂದ `ರಕ್ಷಿತ ಸ್ಮಾಕರ' ಎಂದು
ಘೋಷಿಸಲ್ಪಟ್ಟಿದೆ. ಈ ಕಲ್ಲಿನ ಬಗ್ಗೆಯೇ ಕೆಲವು ಮಂದಿ ಅಧ್ಯಯನ ಕೈಗೊಂಡಿದ್ದಾರೆ. ಇದೀಗ
ಇದೇ ಕಲ್ಲನ್ನು ಆಧರಿಸಿಕೊಂಡು ಪಿ.ಹೆಚ್.ಡಿ ಸಂಶೋಧನಾ ಅಧ್ಯಯನ ವಿಷಯವನ್ನಾಗಿಯೂ ಕೆಲವು
ಮಂದಿ ಕೈಗೊಂಡಿದ್ದಾರೆ.
No comments:
Post a Comment