Wednesday, June 13, 2012

ಸುಲ್ತಾನ್ ಬತ್ತೇರಿ

ಸುಲ್ತಾನ್ ಬತ್ತೇರಿ 1940ರಲ್ಲಿ
ಕರಾವಳಿ ನಗರ ಮಂಗಳೂರು ಹಲವಾರು ಐತಿಹಾಸಿಕ ಪ್ರದೇಶಗಳಿಗೆ ಹೆಸರು ವಾಸಿಯಾಗಿದೆ. ಹಾಗೂ ಯಾತ್ರಿಕರ ಪ್ರವಾಸಿ ತಾಣವೂ ಹೌದು. ಆನಮೇಕ ರಾಜ ಮಹರಾಜರು ಈ ಪ್ರದೇಶದ ಮೇಲೆ ತಮ್ಮ ಅಧಿಪತ್ಯವನ್ನು ಸ್ಥಾಪಿಸಿದ್ದರು. ಇದರಲ್ಲಿ ಮಂಗಳೂರಿನ ಬೋಳುರಿನ ಸುಲ್ತಾನ್ ಬತ್ತೇರಿ ಒಂದು. ಬ್ರಿಟಿಷ್‌ ನೌಕೆಗಳು ಗುರುಪುರ ನದಿಯನ್ನು ಪ್ರವೇಶಿಸುವುದನ್ನು ತಡೆಗಟ್ಟಲು, ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಹೋರಾಟಗಾರ ಮೈಸೂರು ಹುಲಿ ಟಿಪ್ಪುಸುಲ್ತಾನನು 1784 ರಲ್ಲಿ ಇದನ್ನು ನಿರ್ಮಿಸಿದನು. ಐತಿಹಾಸಿಕವಾಗಿ ಮಹತ್ವವಾಗಿರುವ ಈ ರಾಷ್ಟ್ರೀಯ ಸ್ಮಾರಕವು ಇತ್ತೀಚಿಗೆ ನವೀಕರಣಗೊಂಡಿದ್ದು, ಸ್ವಾತಂತ್ರ್ಯ ಹೋರಾಟದ ದಿವ್ಯ ಕುರುಹಾಗಿ ಉಳಿದಿದೆ.
ಈ ಕೋಟೆಯನ್ನು ಕಪ್ಪು ಕಲ್ಲಿನಿಂದ ನಿರ್ಮಿಸಲಾಗಿದೆ. ಇದು ಒಂದು ಚಿಕ್ಕ ಕಾವಲು ಗೋಪುರ ಮಾದರಿಯ ಕೋಟೆಯಾಗಿದ್ದರೂ ಕೋಟೆಯ ಸುತ್ತಮುತ್ತ ಫಿರಂಗಿಗಳನ್ನು ಸ್ಥಾಪಿಸಲಾಗಿದೆ. ಮತ್ತು ವೈರಿಗಳ ಚಲನವಲನಗಳನ್ನು ವೀಕ್ಷಿಸಲು ಅನುಕೂಲವಾಗುವಂತೆ  ರಚಿತವಾಗಿದೆ. ಈ ಕೋಟೆಯ ಅಡಿಭಾಗದಲ್ಲಿ ಸೈನಿಕರ ವಿಶ್ರಾಂತಿ ಕೋಣೆ ಇದೆ. ಮತ್ತು ಸುರಂಗ ಮಾರ್ಗವೂ ಇದೆ ಆದರೆ ಈಗ  ಸಾರ್ವಜನಿಕರಿಗೆ ಇದನ್ನು ನಿರ್ಬಂಧಿಸಲಾಗಿದೆ. ರಾಷ್ಟ್ರಿಯ ಸ್ಮಾರಕವಾಗಿ ಇದು ಘೋಷಣೆ ಯಾದ್ದರಿಂದ ಕೇಂದ್ರ ಪುರತತ್ವ ಇಲಾಖೆ ಇದರ ಮೇಲುಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ. 
ಸುಲ್ತಾನ್ ಬತ್ತೇರಿ ಸೂರ್ಯಾಸ್ತದ ವಿಹಂಗಮ ನೋಟ
ಈ ಕೋಟೆಯ ಮೇಲೆ ನಿಂತು ಪಶ್ಚಿಮ ಅರಬ್ಬಿ ಸಮುದ್ರದ ದಿಗಂತದಲ್ಲಿ ಸೂರ್ಯಾಸ್ತಮಾನದ ಸೊಬಗನ್ನು ನೋಡುವುದೇ ಚೆಂದ,ಮಂಗಳೂರಿನ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ಕಲ್ಪಿಸಬಲ್ಲ ಯೋಜನೆಯ ಅಂಗವಾಗಿ ಇಲ್ಲಿ ನದಿಗೆ ಅಡ್ಡಲಾಗಿ ಸುಲ್ತಾನ್ ಬತ್ತೇರಿ -ತಣ್ಣೀರುಬಾವಿ ನಡುವಿನ ದ್ವಿಪಥ ತೂಗು ಸೇತುವೆ ಸದ್ಯದಲ್ಲೇನಿರ್ಮಾಣವಾಗಲಿದೆ.ಮಂಗಳೂರಿನ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಹೊಸ ದಿಕ್ಕು ನೀಡಬೇಕೆಂಬ ಯೋಚನೆ ಯಲ್ಲಿ ಈ ತೂಗುಸೇತುವೆಯ ಕನಸನ್ನು ಕಂಡವರು ಶಾಸಕರೂ ಮತ್ತು ವಿಧಾನ ಸಭೆಯ ಉಪಸಭಾಧ್ಯಕ್ಷರೂ ಆದ  ಎನ್. ಯೋಗೀಶ್ ಭಟ್. ಕಳೆದ ಐದಾರು ವರ್ಷಗಳಿಂದ ಈ ಬಗ್ಗೆ ಹಲವು ಸಭೆಗಳು ನಡೆದಿವೆ, ಹತ್ತು ಹಲವು ಪ್ರಸ್ತಾವನೆಗಳು ಸಿದ್ಧಗೊಂಡಿವೆ.ಸರಕಾರದಿಂದ 40೦ ಲಕ್ಷ ರೂ. ಬಿಡುಗಡೆಗೊಂಡಿದೆ.
ಸದ್ಯ ಸುಲ್ತಾನ್‌ಬತ್ತೇರಿಯಿಂದ ತಣ್ಣೀರುಬಾವಿಗೆ ದೋಣಿ ಸೇವೆ ಇದೆ. ಇದು ತಣ್ಣೀರುಬಾವಿ ಆಸುಪಾಸಿನ ಜನರ ನೆರವಿಗಾಗಿ ಇರುವ ವ್ಯವಸ್ಥೆ. ಜೊತೆಯಲ್ಲಿ ಕುಳೂರು- ಪಣಂಬೂರು ಮೂಲಕ ಬಸ್ಸು ಸರ್ವಿಸ್ ಕೂಡಾ ಇದೆ. ಅದು ಸುತ್ತು ಬಳಸಿಕೊಂಡು ಹೋಗುವ ದಾರಿ.
ಸುಲ್ತಾನ್‌ಬತ್ತೇರಿ ಬಳಿ ನದಿಗೆ ಸಾಮಾನ್ಯ ಸೇತುವೆ ಕಟ್ಟುವುದು ಕಷ್ಟದ ಮಾತು. ಈ ನದಿಯಲ್ಲಿ ದಿನಂಪ್ರತಿ ನೂರಾರು ಮೀನುಗಾರಿಕಾ ಬೋಟ್‌ಗಳು ಸಂಚರಿಸುತ್ತಿರುತ್ತವೆ. ಹಾಗಾಗಿ ನದಿಯ ಮಧ್ಯಭಾಗದಲ್ಲಿ ಪಿಲ್ಲರ್‌ಗಳನ್ನು ನಿರ್ಮಿಸುವುದು ಅಸಾಧ್ಯ. ಆಗ ಯೋಚನೆಗೆ ಬಂದದ್ದು ಈ ತೂಗುಸೇತುವೆ.
ತೂಗುಸೇತುವೆ ನಗರದಿಂದ ತಣ್ಣೀರುಬಾವಿಗೆ ಹೋಗುವ ದೂರವನ್ನು ಕನಿಷ್ಠ ಆರೇಳು ಕಿ.ಮೀ. ಗಳಷ್ಟು ಕಡಿಮೆ ಮಾಡಲಿದೆ. ತಣ್ಣೀರುಬಾವಿ ಬೀಚ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಆಕರ್ಷಣೀಯ ತಾಣವಾಗಿ ಪರಿವರ್ತಿತಗೊಳ್ಳುತ್ತಿದೆ. ಒಂದು ಬದಿಯಲ್ಲಿ ನದಿ, ಇನ್ನೊಂದೆಡೆ ಸಮುದ್ರ.ಇಂತಹ ಸುಂದರ ತಾಣ ಜನಾಕರ್ಷಣೀಯ ಕೇಂದ್ರವಾಗುವುದು ಸಹಜ.
ಐತಿಹಾಸಿಕ ಸುಲ್ತಾನ್ ಬತ್ತೇರಿ ಕೂಡಾ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರನ್ನು ಸೆಳೆಯುತ್ತಿದೆ. ತೂಗು ಸೇತುವೆ ಪೂರ್ಣಗೊಂಡರೆ ಇಲ್ಲಿನ ಅಂದವೇ ಬೇರೆ.ಪಕ್ಕದಲ್ಲೇ ಬೋಟಿಂಗ್ ಕ್ಲಬ್ ಇದೆ  ನದಿ ನೀರಿನಲ್ಲಿ ಮೋಜು ಮಸ್ತಿ ಮಾಡುವವರಿಗೆ ಇದೊಂದು ಪ್ರಶಸ್ತವಾದ ಸ್ಥಳ. ಸಾವಿರಾರು ಪ್ರವಾಸಿಗರು, ಈ ಸೌಂದರ್ಯ ವೀಕ್ಷಣೆಗೆ ಇಲ್ಲಿ ಭೇಟಿ ಕೊಡುತ್ತಾರೆ.ಮುಂದಿನ ದಿನಗಳಲ್ಲಿ ಇದೊಂದು ಪ್ರಮುಖ ಪ್ರವಾಸಿ ತಾಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

No comments:

Post a Comment