Friday, August 9, 2013

ದಕ್ಷಿಣಕನ್ನಡದ ಗಾಂಧಿ ಕಾರ್ನಾಡ್ ಸದಾಶಿವರಾಯ

ಕಾರ್ನಾಡ್ ಸದಾಶಿವ ರಾವ್ ರವರು ಕರ್ನಾಟಕದ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರು.ಇವರು ಮಂಗಳೂರನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡವರು.

ಕಾರ್ನಾಡ್ ಸದಾಶಿವರಾಯರು ಹುಟ್ಟಿದ್ದು ಮಂಗಳೂರಿನಲ್ಲಿ ೧೮೮೧ ರಲ್ಲಿ. ಅವರು ಅತ್ಯಂತ ಶ್ರೀಮಂತ ವಕೀಲರಾಗಿದ್ದ ರಾಮಚಂದ್ರರಾಯರ ಏಕಮಾತ್ರ ಪುತ್ರ. ಹುಡುಗನಾಗಿದ್ದಾಗಲೂ ಕೊಡುವುದರಲ್ಲಿಯೇ ಸಂತೋಷ. ತನ್ನ ಪುಸ್ತಕ, ಆಟದ ಸಾಮಾನುಗಳನ್ನು ಬಡ ಹುಡುಗರಿಗೆ ಹಂಚಿ ಬಂದು ತಂದೆಯಿಂದ ಬೈಸಿಕೊಂಡದ್ದು ಅನೇಕ ಬಾರಿ. ಸದಾಶಿವರಾಯರು ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಓದಿ ನಂತರ ಮುಂಬೈನಲ್ಲಿ ವಕೀಲಿ ಶಿಕ್ಷಣ ಪಡೆದರು.
          ಆಗ ದೇಶದಲ್ಲಿ ಬಿರುಗಾಳಿಯಂತೆ ಹಬ್ಬುತ್ತಿದ್ದ ಸ್ವದೇಶೀ ಆಂದೋಲನ ಅವರನ್ನು ಸೆಳೆದು ಕೊಂಡಿತು. ತಾವೂ ಅತ್ಯಂತ ಸರಳ ಜೀವನ ನಡೆಸಲು ತೀರ್ಮಾನ ಮಾಡಿ, ತಮ್ಮ ಹೆಂಡತಿ ಶಾಂತಾಬಾಯಿಯವರೊಂದಿಗೆ ಬಾಲವಿಧವೆಯರ, ಹರಿಜನರ ಪುನರ್ವಸತಿ ಕಾರ್ಯಕ್ರಮಗಳನ್ನು ನಡೆಸಿದರು. ದಕ್ಷಿಣ ಕನ್ನಡದ ದೇವಸ್ಥಾನಗಳಲ್ಲಿ ಹರಿಜನರ ಪ್ರವೇಶವನ್ನು ಜನರ ಮನವೊಲಿಸಿ ಸಾಧಿಸಿದರು.

1919ರಲ್ಲಿ ಗಾಂಧೀಜಿ ಸ್ವಾತಂತ್ರ್ಯ ಹೋರಾಟದ ಕಹಳೆ ಮೊಳಗಿಸಿ ಸತ್ಯಾಗ್ರಹಕ್ಕೆ ಕರೆ ನೀಡಿದಾಗ ಕರ್ನಾಟಕದಿಂದ ಸ್ವಯಂಸೇವಕರಾಗಿ ಹೋದ ಮೊದಲಿಗರಲ್ಲಿ ಸದಾಶಿವರಾಯರೊಬ್ಬರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟುವುದರಲ್ಲಿ ಮಗ್ನರಾಗಿ ಹೋದರು ಸದಾಶಿವರಾಯರು. 1923 ರಲ್ಲಿ ಒಂದೇ ವರ್ಷದಲ್ಲಿ ತಮ್ಮ ಕೊನೆಯ ಮಗಳು, ಒಬ್ಬನೇ ಮಗ ಮತ್ತು ತಮ್ಮ ಪ್ರಿಯ ಪತ್ನಿ ಶಾಂತಾಬಾಯಿಯವರನ್ನು ಕಳೆದುಕೊಂಡು ಅಘಾತದಿಂದ ಚೇತರಿಸಿಕೊಳ್ಳಲು ಗಾಂಧೀಜಿಯವರ ಸಾಬರಮತಿ ಆಶ್ರಮಕ್ಕೆ ಧಾವಿಸಿದರು. ಕೆಲವೇ ದಿನಗಳಲ್ಲಿ ಅವರಿಗೆ ಸುದ್ದಿ ಬಂದಿತು. ದಕ್ಷಿಣ ಕನ್ನಡದಲ್ಲಿ ಪ್ರವಾಹ ಹೆಚ್ಚಾಗಿದ್ದು ಜನರ ರಕ್ಷಣೆಗೆ ಪರಿಹಾರ ಕಾರ್ಯಕ್ರಮಗಳನ್ನು ನಡೆಸಬೇಕಿತ್ತು. ತಕ್ಷಣ ತಮ್ಮ ವೈಯಕ್ತಿಕ ಕೊರಗುಗಳನ್ನು ಮರೆತು ತಮ್ಮೂರಿಗೆ ಓಡಿ ಬಂದು, ತಮ್ಮಲ್ಲಿದ್ದ ಹಣವನ್ನೆಲ್ಲ ಹೊರತೆಗೆದು ಪರಿಹಾರ ಕಾಮಗಾರಿಗಳನ್ನು ನಡೆಸಿದರು.
                
 ಕೆ.ಎಸ್. ರಾವ್ ರಸ್ತೆಯಲ್ಲಿದ್ದ ಕಾರ್ನಾಡರ ಮನೆ ಕಾರ್ನಾಡ್ ಕುಟೀರ
ಸದಾಶಿವರಾಯರ ಮನೆ ಸ್ವಾತಂತ್ರ್ಯ ಸಂಗ್ರಾಮದ ತವರು ಮನೆಯಾಗಿತ್ತು. ಮಹಾತ್ಮಾ ಗಾಂಧಿ, ಚಿತ್ತರಂಜನ ದಾಸ, ರಾಜಗೋಪಾಲಾಚಾರಿ ಹಾಗೂ ಸರೋಜಿನಿ ನಾಯ್ಡುರವರಿಗೆ ವಸತಿಗೃಹವಾಗಿತ್ತು.
ದೇಶದಲ್ಲಿ ಉಪ್ಪಿನ ಸತ್ಯಾಗ್ರಹ ಪ್ರಾರಂಭವಾದಾಗ ಕರ್ನಾಟಕದಲ್ಲಿಯೂ 13-4-1930ರಂದು ಪ್ರಾರಂಭಿಸಬೇಕೆಂದು ನಿರ್ಣಯವಾಯಿತು. ಆಗ ಎಐಸಿಸಿಯ ಸದಸ್ಯರೂ, ಪಿಸಿಸಿಯ ಅಧ್ಯಕ್ಷರೂ ಆಗಿದ್ದ ಕಾರ್ನಾಡು ಸದಾಶಿವರಾಯರು ಅಂಕೋಲೆಗೆ ಹೋಗಿ ಅಲ್ಲಿನ ಜನತೆಗೆ ಮಾರ್ಗದರ್ಶನ ನೀಡಿ ಅಲ್ಲಿ ನಾಲ್ಕು ದಿನಗಳಿದ್ದರು. ಮಂಗಳೂರಿನಲ್ಲೂ ಅದೇ ದಿನ ಉಪ್ಪಿನ ಸತ್ಯಾಗ್ರಹ ಆರಂಭವಾಯಿತು. ಎಪ್ರಿಲ್ 17ಕ್ಕೆ ರಾಯರು ಮಂಗಳೂರಿಗೆ ಹಿಂತಿರುಗಿದರು. ಅವರು ಮಂಗಳೂರು ತಲುಪಿದಾಗ ಇಲ್ಲಿನ ಜನತೆ ಸಾವಿರಾರು ಸಂಖ್ಯೆಯಲ್ಲಿ ಸೇರಿ ಅವರಿಗೆ ಸ್ವಾಗತ ನೀಡಿದರು. ಹಾಗೆ ಬಂದವರೇ ಇಲ್ಲಿನ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದರು. ಅವರು ಸಮುದ್ರದಿಂದ ನೀರು ತಂದು ಉಪ್ಪು ಮಾಡುವ ಸಿದ್ಧತೆಯಲ್ಲಿರುವಾಗಲೇ ಅವರ ಬಂಧನವಾಯಿತು. ಅವರ ವಿಚಾರಣೆಯಾಗಿ . 30ರಂದು 15 ತಿಂಗಳ ಕಠಿಣ ಶಿಕ್ಷೆಯನ್ನು ವಿಧಿಸಲಾಯಿತು. ಅವರು ತಿರುಚಿನಾಪಳ್ಳಿ ಮತ್ತು ವೆಲ್ಲೂರು ಜೈಲುಗಳಲ್ಲಿ ಶಿಕ್ಷೆ ಅನುಭವಿಸಿದರು. ಆಗ ನಮ್ಮ ಜಿಲ್ಲೆಯವರಾದ ಆರ್. ಕೆ. ಪ್ರಭು ಅವರೊಂದಿಗಿದ್ದರು.
Scdccಬ್ಯಾಂಕ್ ಆರಂಭ ಕಾರ್ನಾಡರ ಮನೆಯಲ್ಲಿ

ಸ್ವಾತಂತ್ರ್ಯ ಚಳುವಳಿಯಲ್ಲಿ ಅವರಿಗೆ ಮೂರು ಬಾರಿ ಜೈಲು ಶಿಕ್ಷೆಯಾಯಿತು. ಅವರ ಆರೋಗ್ಯ ಜೈಲಿನಲ್ಲಿ ಕುಸಿದುಹೋಯಿತು. ಅಧಿಕಾರಿಗಳು ಅವರಿಗೆ ಸೊಳ್ಳೆ ಪರದೆ ಕೊಟ್ಟರೆ, ಎಲ್ಲರಿಗೂ ಪರದೆ ಕೊಡುವವರೆಗೆ ತಾವೂ ಉಪಯೋಗಿಸುವುದಿಲ್ಲವೆಂದು ಹಟ ಹಿಡಿದು ಹಾಗೆಯೇ ಮಲಗಿದರು.
 
ದೇಶಕಾರ್ಯಕ್ಕಾಗಿ ತಮ್ಮದೆಲ್ಲವನ್ನು ಮಾರಿದರು, ತಮ್ಮ ಪಿತ್ರಾರ್ಜಿತವಾದ ಸ್ವಂತಮನೆ ಕೂಡ ದಾನದಲ್ಲಿ ಕರಗಿಹೋಯಿತು. ಕೊನೆಗೆ ಇವರ ತಾಯಿ ಮತ್ತು ಹೆಣ್ಣು ಮಕ್ಕಳು ಮಾತ್ರ ಬಾಡಿಗೆಯ ಮನೆಯಲ್ಲಿ ಬದುಕಿದರು. ಇವರ ದಾನದ ಪರಿಯನ್ನು ಕಂಡು ಡಾ. ಶಿವರಾಮ ಕಾರಂತರು ಅವರನ್ನುಧರ್ಮರಾಜಎಂದು ಕರೆದರು. ಅವರ ಪ್ರಖ್ಯಾತ ಕಾದಂಬರಿ ಔದಾರ್ಯದ ಉರುಳಲ್ಲಿಯ ನಾಯಕನ ಪಾತ್ರ ಸದಾಶಿವರಾಯರ ಜೀವನವನ್ನೇ ಹೋಲುತ್ತದೆ.
          1936
ಫೈಜಪುರ ಕಾಂಗ್ರೆಸ್ ಅಧಿವೇಶನದಲ್ಲಿ ಇವರಿದ್ದ ಗುಡಿಸಲು ಸೋರಿ ಇವರು ಪೂರ್ತಿ ನೆನೆದು ಹೋದರು. ಭಯಂಕರ ಜ್ವರ ಬಾಧಿಸಿತು. ಯಾರಿಗೂ ತಮ್ಮ ಅನಾರೋಗ್ಯದ ಬಗ್ಗೆ ಹೇಳದೇ ಹಾಗೆಯೇ ಮುಂಬೈಗೆ ಪಕ್ಷದ ಕೆಲಸ ಮಾಡಲು ಬಂದರು. ಜ್ವರ ತೀವ್ರವಾಗಿ ಮುಂದೆರಡು ದಿನಗಳಲ್ಲೇ ದೇಹತ್ಯಾಗ ಮಾಡಿದರು. ಆಗ ಅವರಿಗೆ ಕೇವಲ 56 ವರ್ಷ ವಯಸ್ಸು.
ಇವರು ದಕ್ಷಿಣದ ಗಾಂಧಿ ಎಂದು ಪ್ರಸಿದ್ಧರಾಗಿದ್ದರು. ಜನವರಿ ,೧೯೩೭ ರಂದು ನಿಧನರಾದರು.
ಸುದ್ದಿ ತಿಳಿದ ಮೇಲೆ ತಮ್ಮ ಬಿಡುವಿಲ್ಲದ ಸಮಯದಲ್ಲೂ ಗಾಂಧೀಜಿ ಸದಾಶಿವರಾಯರ ತಾಯಿಯನ್ನು ಸಂತೈಸಲು ಮಂಗಳೂರಿಗೆ ಹೋದರು. ಅವರು ತಾಯಿಗೆ ನಮಸ್ಕರಿಸಿ, ‘ಅಮ್ಮಾ, ಇಂಥ ಧೀಮಂತ ಮಗನನ್ನು ಪಡೆದ ನೀವೇ ಧನ್ಯರುಎಂದು ಕಣ್ಣೀರು ಒರೆಸಿಕೊಂಡರು.



ಕಾರ್ನಾಡ್ ಸದಾಶಿವರಾಯರು ದಕ್ಷಿಣಕನ್ನಡದ ಗಾಂಧಿಯೆಂದೇ ವಿಖ್ಯಾತರಾದವರುಆಗರ್ಭ ಶ್ರೀಮಂತರಾಗಿದ್ದ ಅವರು ತಮ್ಮದೆಲ್ಲ ಸಂಪತ್ತನ್ನು ಸ್ವಾತಂತ್ರ್ಯ ಹೋರಾಟಕ್ಕೆ ನೀರಿನಂತೆ ಚೆಲ್ಲಿದವರು. ಸಾಯುವಾಗ ಅವರ ಜೇಬಿನಲ್ಲಿ ಒಂದು ಪೈ ಕೂಡಾ ಇರಲಿಲ್ಲ
ದುರಂತನಾಯಕ ಕಾರ್ನಾಡ್ ಸದಾಶಿವರಾಯರ ಪೂರ್ವಿಕರ ಆಸ್ತಿ ಎಲ್ಲೆಲ್ಲೂ ಇತ್ತು. ಯಾರೋ ಹೇಳಹೆಸರಿಲ್ಲದವರುಅವರ ಆಸ್ತಿಯನ್ನು ನುಂಗಿ ಹಾಕಿದರು. ಬಾವುಟ ಗುಡ್ಡೆಯಲ್ಲಿ ಕಾರ್ನಾಡರ ಹೆಸರಿನಲ್ಲಿ ಒಂದು ಟ್ರಸ್ಟ್, ಮಂಗಳೂರಿನ ಪ್ರಮುಖ ರಸ್ತೆಗೆ ಅವರ ಹೆಸರನ್ನಿಟ್ಟದ್ದು ಹೊರತು ಪಡಿಸಿದರೆ ಅವರ  ಯಾವುದೇ ಕುರುಹುಗಳಿಲ್ಲ. ಮಂಗಳೂರಿನ ಕೆ.ಎಸ್ ರಾವ್ ರಸ್ತೆಯಲ್ಲಿ ಅವರ ಮನೆ ಇದ್ದ ಕಟ್ಟಡವನ್ನು  ಎಸ್ ಸಿ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ 9 ವರ್ಷಗಳ ಹಿಂದೇಯೇ  ಕೆಡವಿ ಹಾಕಿ ಇದೀಗ ಬಹುಮಹಡಿ ಕಟ್ಟಡ ನಿರ್ಮಾಣವಾಗಿದೆ, ಮನೆಯಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಸಹಕಾರಿ ಬ್ಯಾಂಕ್ ಪ್ರಾರಂಭವಾಗಿತ್ತು ಬಹುಷ ಹೆಚ್ಚಿನವರಿಗೆ ತಿಳಿದಿಲ್ಲ. ಕಾರ್ನಾಡರ ಸಮಾಧಿ ಮಂಗಳೂರಿನ ನಂದಿಗುಡ್ಡ ರುದ್ರಭೂಮಿಯಲ್ಲಿ ಇಂದಿಗೂ ಕಾಣಬಹುದುಬೆಂಗಳೂರಿನಲ್ಲಿ ಸದಾಶಿವನಗರ ಎಂಬ ಬಡಾವಣೆ ಇದೆ. ಅದು ನಗರದ ಶ್ರೀಮಂತರ, ಪ್ರಭಾವಶಾಲಿಗಳ ವಸತಿ. ತಮ್ಮ ಜೀವನದ ಕೊನೆಯಲ್ಲಿ ಏನನ್ನೂ ಉಳಿಸಿಕೊಳ್ಳದೇ ದೇಶಕ್ಕಾಗಿ ಎಲ್ಲವನ್ನೂ ತ್ಯಾಗಮಾಡಿ, ಅಕ್ಷರಶಃ ನಿರ್ಗತಿಕರಾಗಿ, ಚಳಿಯಿಂದ ರಕ್ಷಿಸಿಕೊಳ್ಳಲು ಬೆಚ್ಚಗಿನ ಬಟ್ಟೆಕೂಡ ಇಲ್ಲದೇ ಪ್ರಾಣ ನೀಗಿದ, ಕರ್ನಾಟಕದ ಹೆಮ್ಮೆಯ ಪುತ್ರ ಕಾರ್ನಾಡ್ ಸದಾಶಿವರಾಯರ ಹೆಸರನ್ನೇ ಬಡಾವಣೆ ಹೊಂದಿದೆ ಎಂಬುದು ಬಹಳಷ್ಟು ಜನಕ್ಕೆ ತಿಳಿದಿರಲಾರದು.

No comments:

Post a Comment