ಬಂಟ್ವಾಳದ 'ನೆತ್ತರ ಕೆರೆ' ಮತ್ತು ಟಿಪ್ಪು ಸುಲ್ತಾನನ ರಕ್ತ ಚರಿತೆ...!
ದಕ್ಷಿಣ ಕನ್ನಡ: ಬ್ರಿಟೀಷರ ವಿರುದ್ದ ಸ್ವಾತಂತ್ರ್ಯದ ರಣಕಹಳೆ ಊದಿದ ಮೈಸೂರಿನ ಹುಲಿ ಟಿಪ್ಪು ಸುಲ್ತಾನ್ ಅನೇಕರಿಗೆ ಅಪ್ರತಿಮ ದೇಶಭಕ್ತನೆಂದು ಕಂಡರೂ ಅನೇಕರ ಪಾಲಿಗೆ ಆತ ವಿಲನ್ ಆಗಿದ್ದ ಅದರಲ್ಲೂ ಕರಾವಳಿಯ ಕ್ರೈಸ್ತರು ಮತ್ತು ಕೊಡಗಿನ ಕೊಡವರ ಪಾಲಿಗೆ ಆತ ನರ ಹಂತಕನಾಗಿದ್ದ ಎಂದೂ ಇತಿಹಾಸ ಹೇಳುತ್ತೆ. ಬ್ರಿಟೀಷರ ಪರವಾಗಿ ಇವರು ಕೆಲಸ ಮಾಡುತ್ತಾರೆ ಎಂಬ ಊಹಪೋಹಕ್ಕೆ ಆತ ಕ್ರೈಸ್ತರು ಮತ್ತು ಕೊಡವರ ಮಾರಣ ಹೋಮವನ್ನೇ ಮಾಡಿದ್ದ. ಇದನ್ನು ಪುಷ್ಟಿಕರಿಸುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಈ ಕೆರೆಗೂ ಟಿಪ್ಪುಸುಲ್ತಾನನ (Tippusultan) ಚರಿತ್ರೆಗೂ ಹತ್ತಿರದ ನಂಟಿದೆ.
ಟಿಪ್ಪು ಸುಲ್ತಾನ್ ಅಬಲೆಯರು, ವೃದ್ದರು, ಸೇರಿ ಕರಾವಳಿಯ ಸಾವಿರಾರು ಕ್ರೈಸ್ತರನ್ನು ಸೆರೆ ಹಿಡಿದು ಶ್ರೀರಂಗಪಟ್ಟಣಕ್ಕೆ ಕೊಂಡುಹೋಗುವಾಗ ಸಂದರ್ಭದಲ್ಲಿ ಸೆರೆಯಿಂದ ತಪ್ಪಿಸಿ ಓಡಲು ಯತ್ನಿಸಿದ್ದವರನ್ಜು, ನಡೆದುಕೊಂಡು ಹೋಗಲು ಅಶಕ್ತರಾದವನ್ನು ಇದೇ ಕೆರೆಯ ಬಳಿ ತಲೆ ಕಡಿದು ಕೊಂದು ಹಾಕಿದ್ದನಂತೆ. ಈ ಘಟನೆಗೆ ಸಂಬಂಧಿಸಿದಂತೆ0 ಟಿಪ್ಪುವಿನ ಜೀವನ ಚರಿತ್ರೆಯಲ್ಲೂ ಉಲ್ಲೇಖಗಳಿವೆ ಎನ್ನುವುದು ಇತಿಹಾಸದಿಂದ ತಿಳಿದು ಬರುತ್ತದೆ. ಆ ಕ್ರೌರ್ಯಕ್ಕೆ ಸಾಕ್ಷಿಯಾದ ಕೆರೆಯಾದ ಕಾರಣ ಈ ಕೆರೆಗೆ ನೆತ್ತರಕೆರೆ ಎನ್ನುವ ಹೆಸರು ಬಂತೆನ್ನಲಾಗಿದೆ.
ಇದೇ ಕಾರಣಕ್ಕೆ ಇದರ ಹೆಸರು ನೆತ್ತರಕೆರೆ ಅಂತಾನೂ ಕುಖ್ಯಾತಿ ಪಡೆಯಿತು. ಇದಕ್ಕೆ ಅತಿ ದೊಡ್ಡ ಸಾಕ್ಷ್ಯಾಧಾರವಾಗಿ, ಇಂದಿಗೂ ಮೂಕರೋದನಗೈಯುತ್ತಿರುವ ‘ನೆತ್ತರಕೆರೆ’ ಹಳೆಯ ಕಥೆಯನ್ನು ಹೇಳುತ್ತಿದೆ. ಮಂಗಳೂರಿನಿಂದ ಬಿ.ಸಿ. ರೋಡ್ ಕಡೆಗೆ ಹೋಗುವ ಹೈವೇಯಲ್ಲಿ, ಫರಂಗಿಪೇಟೆಯ ಬಳಿಕ ಸಿಗುವ ಮಾರಿಪಳ್ಳದಿಂದ ಎಡಕ್ಕೆ ಪೊಳಲಿಗೆ ಹೋಗುವ ರಸ್ತೆಯಲ್ಲಿ ಒಂದೂವರೆ ಕಿ.ಮೀ. ಸಾಗಿದರೆ ಈ ನೆತ್ತರಕೆರೆ ಸಿಗುತ್ತದೆ. ಅದೊಂದು ನೀರಿನ ಕೆರೆಯಾಗಿತ್ತು. ಅಲ್ಲಿ ಅಂದು ನೂರಾರು ಜೀವಗಳು ಕತ್ತರಿಸಲ್ಪಟ್ಟು ಹುತಾತ್ಮರಾದವು. ಇದು ರಕ್ತಸಿಕ್ತ ಚರಿತ್ರೆ ಹೊಂದಿದ್ದ ಕಾರಣಕ್ಕಾಗಿಯೇ ಇದಕ್ಕೆ ನೆತ್ತರಕೆರೆ ಅನ್ನೋ ಹೆಸರು ಬಂತು ಅನ್ನೋ ಮಾತಿದೆ.
ಅಷ್ಟೊಂದು ಕ್ರೈಸ್ತರನ್ನು ಏಕಕಾಲದಲ್ಲಿ ಹೇಗೆ ಸೆರೆ ಹಿಡಿದರೆಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತಿದೆಯಾದ್ರೂ ಇದರಲ್ಲಿ ಆಶ್ಚರ್ಯಪಡುವಂಥದ್ದೇನಿಲ್ಲ. ಕ್ರೈಸ್ತರು ತುಂಬಾ ಆಳವಾದ ಧಾರ್ಮಿಕ ನಂಬಿಕೆಯವರು. ಆ ಕಾಲದಲ್ಲಿನ ಕ್ರೈಸ್ತರ ಧಾರ್ಮಿಕ ಶ್ರದ್ಧೆ ಅಪಾರವಾದುದಾಗಿತ್ತು. ಕಾಲ್ನಡಿಗೆಯಲ್ಲಿಯೇ ಮೈಲುಗಟ್ಟಲೆ ದೂರವನ್ನು ಕ್ರಮಿಸಿ ಭಾನುವಾರದ ಪೂಜೆ ಮತ್ತು ಹಬ್ಬಗಳ ಪೂಜೆಗಾಗಿ ಇಗರ್ಜಿಗಳಿಗೆ ಆಗಮಿಸುತ್ತಿದ್ದರು. ದೂರದ ಊರವರು ಹಿಂದಿನ ದಿನವೇ ಬಂದು ಚರ್ಚುಗಳಲ್ಲಿ ತಂಗುತ್ತಿದ್ದರು.
ಆ ಕಾಲ ಬಿರು ಬೇಸಿಗೆಯ ಆರಂಭ. ಇದೇ ಸಂದರ್ಭ ಕ್ರೈಸ್ತರಿಗೆ ಬಹು ಮುಖ್ಯವಾದ ಕಪ್ಪು ದಿನಗಳು ಆರಂಭವಾಗುತ್ತವೆ. ಯೇಸುಕ್ರಿಸ್ತರ ಮರಣ ಮತ್ತು ಪುನರುತ್ಥಾನದ ಆಚರಣೆಯ ಹಬ್ಬಕ್ಕೆ ತಯಾರಿಯಾಗಿ ಉಪವಾಸ, ತ್ಯಾಗ ಭಕ್ತಿಯ 40 ದಿನಗಳ ಕಾಲ ವಿಶೇಷ ಅವಧಿಯನ್ನಾಚರಿಸಲಾಗುತ್ತದೆ. ಈ ಸಂದರ್ಭ ಎಲ್ಲರೂ ದೂರದ ಇಗರ್ಜಿಗಳಿಗೆ ಆಗಮಿಸಿ ಪವಿತ್ರ ಪೂಜಾವಿಧಿಯಲ್ಲಿ ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ.
ಟಿಪ್ಪು ಸುಲ್ತಾನನು ಈ ದಿನವನ್ನೇ ತನ್ನ ಪೈಶಾಚಿಕ ಯೋಜನೆಗಾಗಿ ಆಯ್ದುಕೊಂಡಿದ್ದ ಎನ್ನಲಾಗಿದೆ. ಕಾಡು ಮೇಡು ಅಲೆದು, ದೂರ ದೂರದ ಮನೆಗಳಲ್ಲಿ ಜನರನ್ನು ಬಂಧಿಸುವ ಮಾತು ಅತ್ಯಂತ ಕ್ಲಿಷ್ಟಕರ ಮತ್ತು ಬಹುತೇಕ ಅಸಾಧ್ಯದ ಮಾತು. ಸೈನಿಕರಿಗೂ ಅದು ತುಂಬಾ ಅಪಾಯಕಾರಿ ಆಗುತ್ತಿತ್ತು. ಅದರ ಬದಲಾಗಿ ಅನಾಯಾಸವಾಗಿ ಇಡೀ ಜನಾಂಗವೇ ತಮ್ಮ ತಮ್ಮ ಪ್ರಾರ್ಥನಾ ಮಂದಿರಗಳಲ್ಲಿ, ನಿರಾಯುಧವಾಗಿ ಜಮಾವಣೆಗೊಂಡಾಗ ಅವರನ್ನು ಸುತ್ತುವರೆದು ಸೆರೆ ಹಿಡಿಯುವುದು ಸೈನಿಕರಿಗೆ ಬಾಳೆ ಹಣ್ಣು ಸುಲಿದಷ್ಟೇ ಸಲೀಸು. ಹಾಗಾಗಿ ಅಂದಿನ ಆ ದಿನಕ್ಕಾಗಿ ಟಿಪ್ಪುವಿನ ರಕ್ಕಸ ಸೈನಿಕರು ಹೊಂಚು ಹಾಕಿ ಕಾಯುತ್ತಿದ್ದರು. ಮುಗ್ಧ ಕ್ರೈಸ್ತರಿಗೆ ಅದರ ಕಿಂಚಿತ್ತೂ ಸುಳಿವು ಲಭ್ಯವಾಗಿರಲಿಲ್ಲ.
ಕ್ರೈಸ್ತರೆಲ್ಲರನ್ನೂ ಬಂಧಿಸಬೇಕು ಮತ್ತು ಚರ್ಚ್‍ಗಳನ್ನೆಲ್ಲಾ ಕೆಡವಿ ನಾಶಗೊಳಿಸಬೇಕೆಂಬ ಟಿಪ್ಪುವಿನ ಫರ್ಮಾನು ಆತನ ಅಧಿಕಾರಿಗಳಿಗೆ ತಲುಪಿದ್ದು 1784ರ ಫೆಬ್ರವರಿ 24ರಂದು ಮಂಗಳವಾರ.
ಹೀಗೆ, 1784ರ ಫೆಬ್ರವರಿ 25ರಂದು ಬೆಳ್ಳಂಬೆಳಗ್ಗೆ ಹಕ್ಕಿಗಳ ಚಿಲಿಪಿಲಿ ಸದ್ದು ಮುಕ್ತಾಯವಾಗುತ್ತಿದ್ದಂತೆಯೇ ಕನ್ನಡ ಕರಾವಳಿಯಾದ್ಯಂತ ಜನರ ಆಕ್ರಂದನ, ರುದ್ರ ರೋದನ ಮಾರ್ದನಿಸಿತು. ಅವರ ಯಾತನೆಯು ಅರಬ್ಬಿ ಸಮುದ್ರದಿಂದ ಹಿಡಿದು ಪಶ್ಚಿಮ ಘಟ್ಟಗಳ ವರೆಗೆ ಮಾರ್ದನಿಸಿತು. ಕಿಂಚಿತ್ತೂ ಮುನ್ಸೂಚನೆಯಿಲ್ಲದೇ ನಡೆದ ಘಟನೆಯಿಂದ ಜನರು ತತ್ತರಿಸಿದ್ದರು. ವ್ಯವಸ್ಥಿತ ಯೋಜನೆಯೊಡನೆ ಶಸ್ತ್ರಸಜ್ಜಿತರಾಗಿ ಬಂದಿದ್ದ ಸೈನಿಕರ ಮುಂದೆ ಮುಗ್ಧ ಕ್ರೈಸ್ತರು ಶರಣಾಗಲೇಬೇಕಾಯಿತು.
ಫೆಬ್ರವರಿ 24ರ ಸಂಜೆ ಚರ್ಚುಗಳಲ್ಲಿ ದೂರದೂರಿನಿಂದ ಬಂದಿದ್ದ ಕ್ರೈಸ್ತರು ರಾತ್ರೆ ಕಳೆಯುತ್ತಿದ್ದರು. ಅವರೆಲ್ಲರನ್ನೂ ಬಂಧಿಸುವುದು ಸೈನಿಕರಿಗೆ ಸುಲಭದ ಕೆಲಸವಾಗಿತ್ತು. ಮರು ದಿನ ಮುಂಜಾನೆಯ ಹೊತ್ತಿಗೆ ಇನ್ನುಳಿದವರು, ಹತ್ತಿರದವರು, ಚರ್ಚಿಗೆ ಆಗಮಿಸಿದಾಗ ಅವರನ್ನೂ ಬಂಧಿಸಲಾಗಿತ್ತು. ಚರ್ಚುಗಳಲ್ಲಿ ಧರ್ಮಗುರುಗಳಾದ ಪಾದ್ರಿ ಗಳೇ ಇರಲಿಲ್ಲ.
ಹೀಗೆ ಮಕ್ಕಳು, ಗರ್ಭಿಣಿಯರು, ವೃದ್ಧರು, ಅಶಕ್ಯರು ಸೇರಿದಂತೆ ಸಿಕ್ಕ ಸಿಕ್ಕವರನ್ನೆಲ್ಲಾ ನಿರ್ದಯವಾಗಿ ಕೂಡಿ ಹಾಕಿ ಅವರನ್ನು ಶ್ರೀರಂಗಪಟ್ಟಣಕ್ಕೆ ಕಾಲ್ನಡಿಗೆಯಲ್ಲಿ ಒಯ್ಯಲು ಗುಂಪುಗೂಡಿಸಲಾಯಿತು. ಮಂಗಳೂರು ಬಂಟ್ವಾಳದ ಆಸುಪಾಸಿನ ಚರ್ಚುಗಳಿಂದ ಬಂಧಿಸಲ್ಪಟ್ಟವರನ್ನು ಬೆಳ್ತಂಗಡಿಯ ಗಡಾಯಿಕಲ್ಲಿನ ಬಳಿ ಕೂಡಿಸಲಾಯಿತು. ಇದೇ ರೀತಿ ಬೇರೆಡೆಯಿಂದ ಆಯಾ ಪ್ರದೇಶದ ಜನರನ್ನು ಹತ್ತಿರದ ಘಾಟಿಗಳಿಂದ ಘಟ್ಟ ಹತ್ತಿಸಿ ಅಲ್ಲಿಂದ ಶ್ರೀರಂಗಪಟ್ಟಣಕ್ಕೆ ನಡೆಸಿಕೊಂಡು ಹೋಗಲಾಯಿತು.
ಬಂಧನದ ನಂತರ ನಡೆದ ಘಟನೆಗಳದ್ದೇ ಒಂದು ಪ್ರತ್ಯೇಕ ಅಧ್ಯಾಯ. ಭೀಭತ್ಸಕತೆಯ ವಿರಾಟ್ ಯಾಗವನ್ನೇ ನಡೆಸಿದರು ಟಿಪ್ಪುವಿನ ಸೈನಿಕರು ಮತ್ತು ಅಧಿಕಾರಿಗಳು. ಗಟ್ಟಿಮುಟ್ಟಾಗಿದ್ದ, ಧೈರ್ಯವಂತ ಯುವಕರು, ಪುರುಷರು ಮತ್ತು ಕೆಲ ಮಹಿಳೆಯರು ಪ್ರತಿಭಟಿಸಿದರು. ಹಾಗೆ ಪ್ರತಿಭಟಿಸಿದವರನ್ನೆಲ್ಲಾ ಭೀಕರವಾಗಿ ಚಿತ್ರಹಿಂಸೆ ಕೊಟ್ಟು ವಧಿಸಲಾಯಿತು.
ಅದಕ್ಕೂ ಕಾರಣ ಬಹಳ ಸರಳ. ಟಿಪ್ಪುವಿನಂತೆಯೇ ಆತನ ಸೈನಿಕರು ಮತಾಂಧರೂ, ಕಾಮಾಂಧರೂ, ಕ್ರೂರಿಗಳೂ ಆಗಿದ್ದರು. ನೆತ್ತರಕೆರೆಯ ವಿಶಾಲ ಜಾಗದಲ್ಲಿ ಬಂಧಿಸಲ್ಪಟ್ಟವರ ಜಮಾವಣೆ ಮಾಡಲಾಗಿತ್ತು. ಟಿಪ್ಪುವಿನ ಸೈನಿಕರಿಗೆ ಕ್ರೈಸ್ತ ಯುವತಿ, ಸ್ತ್ರೀಯರನ್ನು ಕಂಡು ಸುಮ್ಮನೆ ಕೂರಲಾಗಲಿಲ್ಲ. ಕಂಡ ಕಂಡ ಹೆಣ್ಣು ದೇಹಗಳ ಮೇಲೆ ರಾಕ್ಷಸರು ಮುಗಿಬಿದ್ದರು. ತಮ್ಮ ಕಣ್ಣೆದುರಲ್ಲೇ ತಂಗಿ, ಅಕ್ಕ, ಹೆಂಡತಿ, ತಾಯಿ ಸೇರಿದಂತೆ ಕುಟುಂಬಸ್ಥರ ಮೇಲಿನ ಬರ್ಬರ ಅತ್ಯಾಚಾರವನ್ನು ಕಂಡ ಪುರುಷರು ರೊಚ್ಚಿಗೆದ್ದರು. ಕ್ರೈಸ್ತ ಪುರುಷರು ಪ್ರತಿಭಟಿಸಿದ್ದನ್ನು ಸಹಿಸಲಾಗಲಿಲ್ಲ. ಕೂಡಲೇ ಅವರು ತಮ್ಮ ತಲವಾರುಗಳಿಂದ ಕಂಡ ಕಂಡವರನ್ನೆಲ್ಲಾ ಕೊಚ್ಚಿ ಹಾಕಿದರು. ಅಲ್ಲೊಂದು ನರಮೇಧವೇ ನಡೆದು ಹೋಯಿತು. ಆ ಹತ್ಯಾಕಾಂಡದಲ್ಲಿ ಕೊಚ್ಚಿ ಹಾಕಲ್ಪಟ್ಟ ದೇಹಗಳು ರಾಶಿಯಲ್ಲಿ ನೆಲಕ್ಕುರುಳಿದವು. ಅವುಗಳಿಂದ ಹರಿದ ರಕ್ತದ ಪ್ರವಾಹ ಪಕ್ಕದಲ್ಲಿಯೇ ಇದ್ದ ಕೆರೆಗೆ ಧಾವಿಸಿತು. ಸಂಜೆಯೊಳಗೆ ಆ ಕೆರೆ ರಕ್ತದಿಂದ ತುಂಬಿ ಕೆಂಪಾಗಿ ಹೋಗಿತ್ತು. ತಂಪಾಗಿದ್ದ ಶುದ್ಧ ನೀರಿನಲ್ಲಿ ಮಾನವರ ಬಿಸಿ ರಕ್ತ ಲೀನವಾಯಿತು. ಭೀಕರ ಮಾರಣಹೋಮಕ್ಕೆ ಆ ಕೆರೆ ಜೀವಂತ ಸಾಕ್ಷಿಯಾಗಿ, ಮೂಕ ರೋದನಗೈಯುತ್ತಿತ್ತು. ಆ ಹೃದಯವಿದ್ರಾವಕ ದೃಶ್ಯಕ್ಕೆ ಪರಿಸರವೆಲ್ಲಾ ಸ್ತಂಭೀಭೂತವಾಗಿತ್ತು.
ಹಾಗೆ ಅಂದಿನಿಂದ ಆ ಕೆರೆಯು ನೆತ್ತರು ತುಂಬಿದ ಕೆರೆ, ನೆತ್ತರು ಹರಿದ ಕೆರೆ ಎಂಬುದಾಗಿ ಜನರಿಂದ ಗುರುತಿಸಲ್ಪಟ್ಟು ಕ್ರಮೇಣ ಅದಕ್ಕೆ ನೆತ್ತರಕೆರೆ ಎಂಬ ನಾಮಕರಣ ಶಾಶ್ವತವಾಯಿತು. ಈಗಲೂ ಅದೇ ಹೆಸರಿನಿಂದ ಅಧಿಕೃತವಾಗಿ ಆ ಜಾಗ ಗುರುತಿಸಲ್ಪಡುತ್ತಿದೆ.
ಹೀಗೆ ದಕ್ಷಿಣ ಕನ್ನಡದ ಅಲ್ಲಲ್ಲಿ ಲೆಕ್ಕವಿಲ್ಲದಷ್ಟು ಕ್ರೈಸ್ತರ ನೆತ್ತರು ಹರಿದು ಹೋಗಿದೆ. ಪಶ್ಚಿಮ ಘಟ್ಟದ ದಟ್ಟಾರಣ್ಯದ ದಾರಿಯಲ್ಲೆಲ್ಲಾ ಕ್ರೈಸ್ತರ ಕೂಗು, ರೋದನ ಮುಗಿಲು ಮುಟ್ಟಿದೆ ಮತ್ತು ದಾರಿಯಲ್ಲೆಲ್ಲಾ ರಕ್ತದ ಸಿಂಚನವಾಗಿದೆ. ಎಷ್ಟೇ ಭೀಕರ ಶಿಕ್ಷೆಯ ಅರಿವಿದ್ದರೂ ಸೆರೆಯಿಂದ ಬಿಡಿಸಿಕೊಳ್ಳುವ ಸಾಹಸಕ್ಕೆ ಹಲವರು ಪ್ರಯತ್ನಪಟ್ಟರು. ಕೆಲವರು ಅಲ್ಲಲ್ಲಿ ತಪ್ಪಿಸಿಕೊಂಡರು. ಹೀಗೆ ಶ್ರೀರಂಗಪಟ್ಟಣದ ಹಾದಿಯಲ್ಲಿನ ಹಲವು ಜಿಲ್ಲೆಗಳಲ್ಲಿ ಕ್ರೈಸ್ತರು ನೆಲೆ ನಿಂತರು. ಕೊಡಗು, ಚಿಕ್ಕಮಗಳೂರು, ಹಾಸನ ಮುಂತಾದ ಕಡೆಗಳಲ್ಲಿ ಹೀಗೆ ತಪ್ಪಿಸಿಕೊಂಡಿದ್ದ ಕ್ರೈಸ್ತರನೇಕರು ವಾಸಿಸಲಾರಂಭಿಸಿದರು. ಅಂತಹ ಕುಟುಂಬಗಳು ಈಗಲೂ ಅಲ್ಲಲ್ಲಿ ಇವೆ.
ಅಂತೂ 1799ರಲ್ಲಿ ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಸೋತು ಹತನಾದ ನಂತರ ಸುಮಾರು ಹತ್ತು ಸಾವಿರದಷ್ಟು ಸಂಖ್ಯೆಯಲ್ಲಿ ಬದುಕುಳಿದಿದ್ದ ಕೆನರಾ ಕ್ರೈಸ್ತರು ಶ್ರೀರಂಗಪಟ್ಟಣದಿಂದ ಸ್ವಾತಂತ್ರ್ಯ ಪಡೆದುಕೊಂಡು 15 ವರ್ಷಗಳ ಕರಾಳ ಜೀವನದಿಂದ ಮುಕ್ತಿ ಪಡೆದು ಕರಾವಳಿಗೆ ಮರಳಿದರು. ಇಲ್ಲಿಗೆ ಬಂದು ನೋಡಿದರೆ ಅವರ ಜಮೀನು, ಆಸ್ತಿಯನ್ನೆಲ್ಲಾ ಮುಸ್ಲಿಮ್ ಮತ್ತು ಇತರ ಜಾತಿಯವರು ಸ್ವಾಧೀನಪಡಿಸಿಕೊಂಡಿದ್ದರು. ಹೆಚ್ಚಿನದನ್ನು ಟಿಪ್ಪುವಿನ ಆಜ್ಷೆ ಮೇರೆಗೆ ಕಬಳಿಸಲಾಗಿತ್ತು. ಬ್ರಿಟಿಷ್ ಸರಕಾರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ಜಮೀನು ಕಳೆದುಕೊಂಡವರ ವಿವರ ಸಂಗ್ರಹಿಸಿ ಬಹುತೇಕರಿಗೆ ಮರಳಿ ತಮ್ಮ ಆಸ್ತಿಪಾಸ್ತಿ ದೊರಕುವಂತೆ ಕ್ರಮ ಕೈಗೊಂಡರು.
ಧರೆಗುರುಳಿದ್ದ ತಮ್ಮ ನೆಚ್ಚಿನ ಪ್ರಾರ್ಥನಾ ಮಂದಿರಗಳನ್ನು ಆಯಾ ಸ್ಥಳಗಳ ಕ್ರೈಸ್ತರು ಕ್ರಮೇಣ ಮರು ಸ್ಥಾಪಿಸಿದರು. ಹೀಗೆ ಮಾನವ ಕುಲದಲ್ಲಿ ಕಪ್ಪು ಚುಕ್ಕೆಯಾಗಿರುವ ಟಿಪ್ಪು ಸುಲ್ತಾನನ ಕರಾಳ ಶಾಸನಕ್ಕೆ ಬಲಿಯಾದ ಅಧ್ಯಾಯದಿಂದ ಕೊಂಕಣ ಪ್ರದೇಶದ ಕ್ರೈಸ್ತರು ಕ್ರಮೇಣ ಹೊರ ಬಂದರು.
Comments
Post a Comment